ನಾಯಕನಾಗುವುದಕ್ಕೂ ಅದೃಷ್ಟ ಬೇಕು. ಆದರೆ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ದಿನಕ್ಕೊಬ್ಬರು ಬರುತ್ತಿದ್ದಾರೆ. ಅದು ಹೇಗೆ? ಇದಕ್ಕೆ ಬೆಸ್ಟ್ ಉದಾಹರಣೆ ನೀಡುತ್ತಿದ್ದಾರೆ ಸಂಚಾರಿ ಚಿತ್ರದ ನಾಯಕ ರಾಜ್.
ಚಿತ್ರಕ್ಕೆ ಈ ಮೊದಲು ನಾಯಕರನ್ನು ಭೇಟಿ ಮಾಡೋಣ ಎಂದು ಕೆಲವರಲ್ಲಿ ಹೋದೆವು. ಅವರ ಸಂಭಾವನೆ ಕೇಳಿ ತಲೆ ತಿರುಗಿ ಬೀಳುವುದು ಬಾಕಿ ಇತ್ತು. ಇದ್ಯಾಕೋ ಸರಿ ಹೋಗುತ್ತಿಲ್ಲ ಎಂದು ಭಾವಿಸಿದ ನಿರ್ದೇಶಕರು, ನೀನೇ ಹೀರೋ ಆಗು ಎಂದರು. ಹೀಗಾಗಿ ನಾನು ನಾಯಕನಾದೆ ಎನ್ನುತ್ತಾರೆ ಆಕಸ್ಮಿಕವಾಗಿ ನಾಯಕನ ಪಟ್ಟ ಅಲಂಕರಿಸಿದ ರಾಜ್. ಅಷ್ಟೇ ಅಲ್ಲ, ಬೇರೆಯವರಿಗೆ ಕೋಟಿ ಏಕೆ ಕೊಡಬೇಕು. ಆಕ್ಟಿಂಗ್ ಕ್ಲಾಸ್‌ಗೆ ಹೋಗಿ ಅಭಿನಯ ಕಲಿತು ಕ್ಯಾಮೆರಾ ಮುಂದೆ ನಿಲ್ಲು ಎಂದು ನಿರ್ಮಾಪಕರು ಹೇಳಿದರು. ಹೀಗೆ ರಾಜ್ ಸಂಚಾರಿ ಚಿತ್ರದ ನಾಯಕರಾದರು.
ಇದನ್ನು ನಿರ್ದೇಶಿಸುತ್ತಿರುವವರು ಪಯಣ ಚಿತ್ರದ ನಿರ್ದೇಶಕ ಕಿರಣ್‌ಗೋವಿ. ಹಾಗಾದರೆ ಪಯಣ, ಸಂಚಾರಿ ಎರಡೂ ಸಾಮಾನ್ಯ ಒಂದೇ ಅರ್ಥ ಕೊಡುವ ಹೆಸರಿನ ಚಿತ್ರಗಳಲ್ಲವೇ ಎಂದರೆ, ಅಲ್ಲ, ಚಿತ್ರದ ಕತೆಯೇ ಬೇರೆ ಎನ್ನುತ್ತಾರೆ ಕಿರಣ್. ಚಿತ್ರಕ್ಕೆ ಡ್ಯಾನ್ಸ್ ಬೆಡಗಿ ಬಿಯಾಂಕಾ ದೇಸಾಯಿ ನಾಯಕಿ. ಅಂದಹಾಗೆ ನೀರು ಕಂಡರೆ ಒಂದು ಮಾರು ದೂರ ಓಡುತ್ತಿದ್ದ ಬಿಯಂಕಾ ಚಿತ್ರಕ್ಕಾಗಿ ಭಯ ಎಲ್ಲವನ್ನೂ ಬಿಟ್ಟು ಈಜೋದನ್ನೇ ಕಲಿತಿದ್ದಾರಂತೆ.