ಮನಃಶಾಸ್ತ್ರಜ್ಞ ಹಾಗೂ ಮಂತ್ರವಾದಿ ಪಾತ್ರದ ಹಿನ್ನೆಲೆಯಲ್ಲಿ ಮೂಡಿ ಬಂದ ಚಿತ್ರ ಆಪ್ತಮಿತ್ರ. ಇದೀಗ ಆಪ್ತರಕ್ಷಕ ಚಿತ್ರವೂ ಹೆಚ್ಚುಕಡಿಮೆ ಅದೇ ಪಾತ್ರಗಳನ್ನೂ ಮೂಲ ಆಧಾರ ಸ್ತಂಭಗಳಾಗಿ ಹೊಂದಿದೆ. ಆದರೆ ಕಥಾಹಂದರ ಮಾತ್ರ ಬೇರೆ. ಆಪ್ತಮಿತ್ರದಂತೆ ಇಲ್ಲೂ ಕೂಡ ಮನಃಶಾಸ್ತ್ರಜ್ಞನ ಪಾತ್ರದಲ್ಲಿ ಮತ್ತೆ ವಿಷ್ಣುವರ್ಧನ್ ಕಾಣಿಸಿಕೊಳ್ಳಲಿದ್ದು, ಮಂತ್ರವಾದಿಯ ಪಾತ್ರದಲ್ಲಿ ಹಿಂದಿನಂತೆ ಅವಿನಾಶ್ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರ ಮೂಡಿ ಬರುವುದಕ್ಕೆ ಗಟ್ಟಿಯಾದ ಕಾರಣವೂ ಇದೆ ಎನ್ನುತ್ತಾರೆ ನಿರ್ದೇಶಕ ಪಿ. ವಾಸು. ಆಪ್ತಮಿತ್ರ ಚಿತ್ರ ತಮಿಳಿನಲ್ಲೂ ಹಿಟ್ ಆಗಿತ್ತು. ಮನೆಯಲ್ಲಿ ಎಲ್ಲರೂ ರಾ..ರಾ.. ಹಾಡನ್ನು ಇಷ್ಟಪಟ್ಟಿದ್ದರು. ಒಬ್ಬರು ನಿನ್ನ ಸಿನಿಮಾದಿಂದ ಸಮಸ್ಯೆಯಾಗಿದೆ ಎಂದು ಮನೆಗೆ ಕರೆಸಿದ್ದರು. ಅಲ್ಲೊಬ್ಬಳು ರೋಗಿಯಿದ್ದಳು. ಆಕೆಗೆ ರಾ..ರಾ.. ಹಾಡು ಕೇಳಿದ ಕೂಡಲೇ ಆಕ್ಟಿವ್ ಆಗುತ್ತಿದ್ದಳು. ಅದೇ ಆಪ್ತರಕ್ಷಕ ಚಿತ್ರದ ಕತೆಗೊಂದು ತಿರುಳು ಸಿಕ್ಕಿತು ಎನ್ನುತ್ತಾರೆ ವಾಸು.
ಚಿತ್ರವನ್ನು ಎಲ್ಲಾ ಭಾಷೆಯಲ್ಲೂ ರಿಮೇಕ್ ಮಾಡಲು ಯೋಜಿಸಿದ್ದಾರೆ ನಿರ್ದೇಶಕರು. ಅಷ್ಟೇ ಅಲ್ಲ, ಈ ಚಿತ್ರದ ಬಳಿಕ ಬಹುಕಲಾವಿದರನ್ನು ಹಾಕಿಕೊಂಡು ಹಿಂದಿಯಲ್ಲಿ ಒಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಮೂಲತಃ ತಮಿಳು ನಿರ್ದೇಶಕರಾಗಿರುವ ವಾಸು, ಹಲವು ಕನ್ನಡ ಚಿತ್ರಗಳನ್ನೂ ಮಾಡಿದ್ದಾರೆ. ಈ ಮೂಲಕ ಕನ್ನಡ ಪ್ರೀತಿಯನ್ನು ತೋರಿಸಿದ್ದಾರೆ ಅನ್ನೋಣವೇ?