ಐಂದ್ರಿತಾ ರೇ ಅಂತಿಂಥ ಹುಡುಗಿಯಲ್ಲ ಕಣ್ರೀ. ಕ್ಯಾಮರಾ ಎದುರು ನಿಂತು ಲೈಟ್ಸ್, ಕ್ಯಾಮರಾ, ಆಕ್ಷನ್ ಎಂದಾಗ ನಿರ್ದೇಶಕರು ಕೊಟ್ಟ ಡೈಲಾಗನ್ನು ಹೇಳುವ ಗೊಂಬೆ ಇವಳಂತೂ ಖಂಡಿತಾ ಅಲ್ಲವಂತೆ. ಧೂಳ್ ಚಿತ್ರದ ಮೂಲಕ ಐಂದ್ರಿತಾ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ತನ್ನ ಪ್ರತಿಭೆಯ್ನು ಪ್ರದರ್ಶಿಸಲಿದ್ದಾಳೆ. ಆಕೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿರುವುದು ತನ್ನ ಪಾತ್ರಕ್ಕೆ ಮಾತ್ರ.
ಹೌದು. ಇತ್ತೀಚೆಗೆ ಐಂದ್ರಿತಾ ಕರೀನಾ ಕಪೂರ್ ಅಭಿನಯದ ಕಂಭಕ್ತ್ ಇಶ್ಕ್ ಚಿತ್ರ ನೋಡುತ್ತಿದ್ದರಂತೆ. ಚಿತ್ರದಲ್ಲಿ ಕರೀನಾ ತುಂಬ ವಿಧವಿಧವಾದ ಫ್ಯಾಷನ್ ಉಡುಪುಗಳನ್ನು ತೊಟ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡುತ್ತಿದ್ದಂತೆ ಐಂದ್ರಿತಾ ಮನದಲ್ಲೊಂದು ಪುಟ್ಟ ಯೋಚನೆ ಹುಟ್ಟಿತು. ಧೂಳ್ ಚಿತ್ರಕ್ಕೆ ತನ್ನ ಐಡಿಯಾಗಳ ಕಾಸ್ಟ್ಯೂಮ್‌ಗಾಗಿ ತಾನ್ಯಾಕೆ ಟ್ರೈ ಮಾಡಬಾರದು ಎಂದು.
ಹೀಗೆ ತನ್ನ ಮನದಲ್ಲಿ ಬಂದ ಯೋಚನೆಯನ್ನು ನಿರ್ದೇಶಕ ಧರಣಿ ಅವರಿಗೆ ಹಸ್ತಾಂತರಿಸಿದಳು ಐಂದ್ರಿತಾ. ಧರಣಿ ಕೂಡಾ ಅಷ್ಟೇ ಉತ್ಸಾಹದಿಂದ ಚಿತ್ರಕ್ಕೆ ಯೌವನಯುತ ದಿರಿಸುಗಳ ಅಗತ್ಯವಿರುವುದರಿಂದ ಐಂದ್ರಿತಾ ಯೋಚನೆ 100 ಪರ್ಸೆಂಟ್ ಒಕೆ ಅಂದರಂತೆ. ಅಲ್ಲಿಂದಲೇ ಶುರುವಾಯಿತು ಐಂದ್ರಿತಾ ಜೈತ್ರಯಾತ್ರೆ.
MOKSHA
ಬೆಂಗಳೂರು, ಮುಂಬೈ ಹೀಗೆ ಮಹಾನಗರಗಳ ಖ್ಯಾತ ಮಾಲ್‌ಗಳು, ಫ್ಯಾಷನ್ ದಿರಿಸುಗಳ ಬುಟೀಕ್‌ಗಳಲ್ಲೆಲ್ಲ ತಡಕಾಡಿ ಐಂದ್ರಿತಾ ಧೂಳ್‌ಗಾಗಿ ಆಕೆಗೆ ಬೇಕಾದ ಡ್ರೆಸ್‌ಗಳನ್ನು ಸೆಲೆಕ್ಟ್ ಮಾಡಿದರಂತೆ. ವಿಶೇಷವಾದ, ಅಂತಹ ಮಾದರಿ ಎಲ್ಲೂ ಸಿಗದ ಡಿಸೈನರ್ ವೇರ್‌ಗಳಷ್ಟೇ ನನಗೆ ಬೇಕಿತ್ತು. ಅದಕ್ಕಾಗಿ ಹುಡುಕಿ ಹುಡುಕಿ ಸುಸ್ತಾದೆ ಎಂದೂ ಹೇಳುತ್ತಾರೆ ಐಂದ್ರಿತಾ.
ಈ ಮೊದಲು ನನಗೆ ಒಬ್ಬ ಕಾಸ್ಟ್ಯೂಮ್ ಡಿಸೈನರ್ ಚಿತ್ರಕ್ಕಾಗಿ ಎಷ್ಟು ಶ್ರಮ ವಹಿಸುತ್ತಾರೆ ಎಂದು ಗೊತ್ತೇ ಇರಲಿಲ್ಲ. ಅವರ ಶ್ರಮ ನನಗೆ ಈಗ ಅರ್ಥವಾಯಿತು. ನನ್ನೊಬ್ಬಳ ಬಟ್ಟೆಗಾಗಿ ಹುಡುಕಾಡಿಯೇ ಹೈರಾಣಾಗಿದ್ದೇನೆ ನಾನು. ಅವರು ಎಲ್ಲರಿಗೂ ಡ್ರೆಸ್ ಅಂತಿಮಗೊಳಿಸುವುದಷ್ಟೇ ಅಲ್ಲ, ಡ್ರೆಸ್‌ಗೆ ಮ್ಯಾಚ್ ಆಗುವ ಆಭರಣ, ಚಪ್ಪಲಿ ಎಲ್ಲವನ್ನೂ ರೆಡಿ ಮಾಡಬೇಕು. ಇದು ತುಬ ಕಷ್ಟದ ಕೆಲಸವಪ್ಪಾ ಅಂತ ಹೇಳುತ್ತಾಳೆ ಐಂದ್ರಿತಾ.
ಅಷ್ಟೇ ಅಲ್ಲ. ಧೂಳ್‌ಗಾಗಿ ಡ್ರೆಸ್ ಡಿಸೈನ್ ಮಾಡಿದ್ದೇನೆ. ಮಾಡಿದ್ದಕ್ಕೆ ನಿರ್ದೇಶಕರು ಹೆಚ್ಚು ದುಡ್ಡನ್ನೂ ನೀಡಿದ್ದಾರೆ. ಆದರೆ ನನಗಿನ್ನು ಈ ಕೆಲಸ ಮಾಡುವ ಉಸಾಬರಿ ಬೇಡಪ್ಪಾ ಎಂದು ತನ್ನೆಲ್ಲಾ ಹಲ್ಲು ಕಾಣಿಸುವಂತೆ ನಗುತ್ತಾರೆ ಐಂದ್ರಿತಾ.