ನಿರ್ದೇಶಕ ಪ್ರೇಮ್ ಶಿಷ್ಯರಲ್ಲಿ ಒಬ್ಬೊಬ್ಬರಾಗಿ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಸಂತು, ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಅಭಿನಯದ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮತ್ತೊಬ್ಬ ಶಿಷ್ಯರಾದ ವಿಜಯ್, ಗುಬ್ಬಿ ನಿರ್ದೇಶಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಪ್ರೇಮ್ ಅವರ ಮತ್ತೊಬ್ಬ ಸಹಾಯಕ ರಘು ಹಾಸನ ಚಿತ್ರ ನಿರ್ದೇಶಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಚಿತ್ರದ ಹೆಸರು ತಥಾಸ್ತು. ಇಂದಲ್ಲ ನಾಳೆ ಎಂಬುದು ಅಡಿಬರಹ. ಇಲ್ಲಿ ಬಹುತೇಕ ಜೋಗಿ ತಂಡವೇ ತಥಾಸ್ತು ಚಿತ್ರದಲ್ಲಿ ಇರಲಿದೆ. ಅಂದರೆ, ತಾಂತ್ರಿಕವರ್ಗ, ಕತೆ, ಚಿತ್ರಕತೆ, ನಿರ್ದೇಶನದ ಹೊಣೆ ರಘು ಅವರದ್ದು. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಎಂ.ಆರ್. ಸೀನು ಛಾಯಾಗ್ರಾಹಣ... ಹೀಗೆ ಎಲ್ಲರೂ ಇಲ್ಲಿ ಒಂದಾಗಲಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ರಘು ವೃತ್ತಿ ಬದುಕಿನಲ್ಲೇ ಮಾಡದಿರುವ ಪಾತ್ರವದು ಎಂಬುದು ಚಿತ್ರತಂಡದ ಅಭಿಮತ.
ಚಿತ್ರಕ್ಕೆ ಕರಣ್ ಎಂಬ ಹೊಸ ಹುಡುಗನನ್ನು ಪರಿಚಯಿಸುತ್ತಿದ್ದಾರೆ. ಇವರು ಈಗಾಗಲೇ ತಮಿಳಿನ ಚಿತ್ರವನ್ನೊಂದರಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಮಿಲನದ ಪಾರ್ವತಿ ಮೆನನ್ ನಾಯಕಿಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಒಲ್ಲೆ ಎಂದು ಬಿಟ್ಟರೆ ಮೊಗ್ಗಿನ ಮನಸು ರಾಧಿಕಾ ಪಂಡಿತ್ ಆ ಸ್ಥಾನ ಅಲಂಕರಿಸಬಹುದು. ಕರಿಯ ಚಿತ್ರದಿಂದ ಇಂದಿನ ರಾಜ್ವರೆಗೆ ಪ್ರೇಮ್ ಅವರ ಪ್ರತಿ ಚಿತ್ರಕ್ಕೂ ಸಹಾಯಕರಾಗಿದ್ದ ರಘು ಅವರೀಗ ನಿರ್ದೇಶನದ ಹಾದಿ ಹಿಡಿದಿದ್ದಾರೆ.