ಸಂಕಲನಕಾರ ಸುರೇಶ್ ಅರಸ್ ನಿರ್ಮಾಣದ ಪೆರೋಲ್ನಲ್ಲಿ ರಿಯಲ್ ಫೈಟಾಗಿದೆ. ಸಕಾಲದಲ್ಲಿ ನಿರ್ಮಾಪಕ-ನಿರ್ದೇಶಕರ ಮಧ್ಯ ಪ್ರವೇಶದಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಾಲ್ವರು ಹೊಸ ಹುಡುಗರ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಮಾರಕಾಸ್ತ್ತ್ರಗಳನ್ನು ಬಳಸಿ ಹೊಡೆದಾಡುವ ದೃಶ್ಯದಲ್ಲಿ ಒಬ್ಬನ ಕೈಗೆ ಗಾಯವಾಯಿತು. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಭಾವಿಸಿ ಆತನ ಕಡೆಯವರು ಎನ್ನಲಾದ ಒಂದಷ್ಟು ಜನ ಅಲ್ಲಿ ಜಮಾಯಿಸಿದ್ದಾರೆ. ಇದೇ ವೇಳೆ, ಅತ್ತ ಎದುರಾಳಿಯ ಕಡೆಯ ಒಂದಷ್ಟು ಜನರೂ ಸ್ಥಳಕ್ಕೆ ಬಂದಾಗ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಇನ್ನೇನು ಮರಾಮಾರಿ ನಡೆದೇ ಹೋಯಿತು ಎನ್ನುವ ಹಂತದಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರು ಮಧ್ಯೆ ಪ್ರವೇಶಿಸಿ ಎರಡೂ ಕಡೆ ರಾಜಿ ಮಾಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿದಿದೆ. ಇನ್ನು ಹತ್ತು ದಿನಗಳ ಶೂಟಿಂಗ್ ಬಾಕಿ ಇದೆ. ಅಷ್ಟರೊಳಗೆ ಈ ಹುಡುಗರು ಏನಾದರೂ ಅನಾಹುತ ಮಾಡಿ ಚಿತ್ರಕ್ಕೆ ಹಾನಿಯುಂಟು ಮಾಡಬಹುದು ಎಂಬ ಭಯದಿಂದ ಪೊಲೀಸ್ ರಕ್ಷಣೆಯ ನಡುವೆ ಇದೀಗ ಚಿತ್ರೀಕರಣ ನಡೆಸಲಾಗುತ್ತಿದೆಯಂತೆ. ಅದೆಲ್ಲಾ ಹಾಗಿರಲಿ, ಚಿತ್ರ ಛಾಯಾಗ್ರಾಹಕರು ಈ ರಿಯಲ್ ಫೈಟನ್ನು ಸೆರೆಹಿಡಿದ ಬಗ್ಗೆ ಮಾತ್ರ ಇನ್ನು ಮಾಹಿತಿ ಇಲ್ಲ.