ತಂಗಿ, ತವರು ಎಂದರೆ ಮೊದಲು ಅಳುಮುಂಜಿ ಪಾತ್ರಗಳ ಬಗ್ಗೆ ನೆನಪಾಗುತ್ತಿದ್ದ ಶ್ರುತಿ, ರಾಧಿಕಾ ಸಾಲಿಗೆ ಇದೀಗ ಪೂಜಾ ಗಾಂಧಿ ಸೇರ್ಪಡೆಯಾಗಲು ಹೊರಟಿದ್ದಾರೆ. ಇದುವರೆಗೆ ಮಳೆ, ಪ್ರೀತಿ, ಆಕ್ಷನ್ ಹೀಗೆ ಎಲ್ಲ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪೂಜಾ ಗಾಂಧಿ ಮೊದಲ ಬಾರಿಗೆ ಕಣ್ಣೀರ ಕಥೆ ಇರುವ ತವರಿನ ಋಣ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮುಂಗಾರು ಮಳೆಯಿಂದ ಇಲ್ಲಿಯವರೆಗೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರದ ಕತೆ ಇಷ್ಟವಾಯಿತು. ಈ ಚಿತ್ರದಲ್ಲಿ ನಾನು ಅಳುತ್ತಾ ಪ್ರೇಕ್ಷಕರ ಕಣ್ಣಲ್ಲೂ ನೀರು ಸುರಿಸುತ್ತೇನೆ. ಬೇರೆ ಚಿತ್ರಗಳಲ್ಲಿ ಹುಡುಗ ಕೈ ಕೊಟ್ಟಾಗ ಅಳುತ್ತಿದ್ದೆ, ಈ ಚಿತ್ರದಲ್ಲಿ ತವರಿಗಾಗಿ ಅಳುತ್ತೇನೆ ಎಂದು ಚಿತ್ರದ ಬಗ್ಗೆ ಮಾತನಾಡಿದರು ಪೂಜಾ.
ಹಾಗಾದರೆ ಅಳುವ ದೃಶ್ಯಕ್ಕಾಗಿ ಗ್ಲಿಸರಿನ್ ಹಾಕಿಕೊಳ್ಳುತ್ತೀರಾ? ಅದೆಲ್ಲ ಮೂಡ್ ಮೇಲೆ ಅವಲಂಬಿತವಾಗಿರುತ್ತದೆ. ಅಳುವ ದೃಶ್ಯಕ್ಕೆ ಸಾಮಾನ್ಯವಾಗಿ ಗ್ಲಿಸರಿನ್ ಬಳಸುವುದಿಲ್ಲ. ಇಲ್ಲಿ ಮನಸ್ಸಿಗೆ ಟಚ್ ನೀಡುವ ದೃಶ್ಯಗಳಿವೆ. ಅಷ್ಟೇ ಅಲ್ಲ, ಪ್ರೇಕ್ಷಕರ ಕಣ್ಣು ಒದ್ದೆ ಮಾಡುವ ಡೈಲಾಗ್‌ಗಳಿವೆ. ಹಾಗಾಗಿ ಗ್ಲಿಸರಿನ್ ಬಳಸುವ ಅಗತ್ಯವಿಲ್ಲ ಎನ್ನುತ್ತಾರೆ ಪೂಜಾ. ಚಿತ್ರದಲ್ಲಿ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವ ನಾಯಕ ಮನೆಗೆ ಬರುವ ಅಪರೂಪದ ಅತಿಥಿ. ಗಂಡ ಇಲ್ಲದ ಸಮಯದಲ್ಲಿ ಮನೆಯವರು ಏನೆಲ್ಲ ಕಿರುಕುಳ ನೀಡುತ್ತಾರೆ ಎಂಬುದೇ ತವರಿನ ಋಣ ಎನ್ನುತ್ತಾರೆ ನಿರ್ದೇಶಕ ರಮೇಶ್ ರಾಜ್.
ಅಂದ ಹಾಗೆ ಇದು ವಿಷ್ಣುವರ್ಧನ್, ಸಿತಾರಾ ಅಭಿನಯದ ಹಾಲುಂಡ ತವರು ಚಿತ್ರದಂತೆ ಇರುತ್ತದೆ ಎಂದು ಸುಳಿವು ನೀಡುತ್ತಾರೆ ನಿರ್ದೇಶಕರು.