ಚಿತ್ರೀಕರಣದ ವೇಳೆ ಪೆರೋಲ್ ಚಿತ್ರದ ನಾಯಕರು ಬಡಿದಾಡಿಕೊಂಡ ಪ್ರಕರಣದ ಇದೀಗ ಇನ್ನೊಂದು ತಿರುವು ಪಡೆದುಕೊಂಡಿದೆ. ನಾಯಕರಾದ ವಿಶ್ವ ಮತ್ತು ಶರತ್ ಇಬ್ಬರು ತಾವು ಹೀಗೆ ಮಾಡೆ ಇಲ್ಲ ಎನ್ನುತ್ತಿದ್ದಾರೆ.
ಜೋಶ್ನಲ್ಲಿ ಒಬ್ಬರಿಗೊಬ್ಬರು ಜೋರಾಗಿ ತಳ್ಳಾಡಿಕೊಂಡರು. ನಿರ್ದೇಶಕರು ಕಟ್... ಕಟ್ ಎಂದು ಹೇಳಿದರೂ ರಿಯಲ್ ಆಗಿ ಜಗಳ ಮಾಡಿಕೊಂಡರು. ಎರಡು ಕಡೆಯ ಹುಡುಗರು ಹೊಡೆಯುವುದಕ್ಕೆ ಮುಂದಾಗಿದ್ದರು. ಕೊನೆಗೆ ಸೆಟ್ನಲ್ಲಿದ್ದ ಕೆಲಸಗಾರರು ಇಬ್ಬರನ್ನು ಸುಮ್ಮನಿರಿಸಿದರು. ಇದೀಗ ಇವರಿಬ್ಬರು ಹಾಗೇನು ಆಗೇ ಇಲ್ಲ ಎನ್ನುತ್ತಿದ್ದಾರೆ.
ಅಯ್ಯೋ ಏನು ಇಲ್ಲ ಸಾರ್, ಯಾರೋ ನಮಗೆ ಆಗದವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾವೆಲ್ಲ ಸೆಟ್ನಲ್ಲಿದ್ದೇವೆ. ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಿದ್ದೇವೆ ಎಂದು ಶರತ್ ಹೇಳಿದರೆ, ಪ್ರಚಾರಕ್ಕಾಗಿ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದವರು ಈ ಬಗ್ಗೆ ಕೇಳಿ ಗಾಬರಿಯಾಗಿದ್ದಾರೆ ಎನ್ನುತ್ತಾರೆ ವಿಶ್ವ. ಅದೆಲ್ಲಾ ಹಾಗಿರಲಿ.
ಈ ಘಟನೆಯ ಬೆನ್ನಲ್ಲೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಬಿ. ಸುರೇಶ್ಗೆ ಸಾರ್ವಜನಿಕರು ಕೈ ಮಾಡಿದ್ದಾರೆ ಎನ್ನಲಾಗಿದೆ. ಗವಿಪುರಂನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಸ್ಥಳೀಯರೊಬ್ಬರ ಕೆನ್ನೆಗೆ ಹೊಡೆದರಂತೆ, ಇದರಿಂದ ಆಕ್ರೋಶಿತರಾದ ಸ್ಥಳಿಯರು ಸುರೇಶ್ ಮೇಲೆ ಕೈ ಮಾಡಿದರು. ಕೊನೆಗೆ ಸಾರಿ ಕೇಳಿದ ಮೇಲೆ ಅವರನ್ನು ಬಿಡಲಾಯಿತು. ಅಂತೂ ಪೆರೋಲ್ ಪುರಾಣ ಸಧ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಮುಂದೇನಾಗುತ್ತೋ ಕಾದು ನೋಡಬೇಕು.