ಪೆರೋಲ್ ಚಿತ್ರದಲ್ಲಿ ನಾಯಕರಿಬ್ಬರು ಬಡಿದಾಡಿಕೊಂಡರಂತೆ. ರೀಲ್ ಫೈಟ್ ಮಾಡಲು ಹೋಗಿ ರಿಯಲ್ಲಾಗಿಯೇ ಫೈಟ್ ಮಾಡಿಕೊಂಡರಂತೆ. ಯಾರೆಲ್ಲಾ ಹೆಣಗಾಡಿದರೂ ಜಗಳ ಬಿಡಿಸಲಾಗಲಿಲ್ಲವಂತೆ. ಕೊನೆಗೆ ನಿರ್ಮಾಪಕರು ಹಾಗೂ ನಿರ್ದೇಶಕರೇ ಖುದ್ದು ಜಗಳ ಬಿಡಿಸಿ ಸಾಂತ್ವನ ಮಾಡಿದರಂತೆ. ಇದು ಪೆರೋಲ್ ಬಗ್ಗೆ ಚಾಲ್ತಿಯಲ್ಲಿರುವ ಸುದ್ದಿ.
ಈ ಸುದ್ದಿಯೀಗ ಕಟ್ಟು ಕಥೆಯೇ ಅಥವಾ ವಾಸ್ತವವೇ ಎಂದು ಮಾಧ್ಯಮವೇ ಕೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಿರ್ದೇಶಕರು ಹಾಗೂ ನಿರ್ಮಾಪಕರು, ಇದೆಲ್ಲಾ ಖಂಡಿತ ಸತ್ಯಕಥೆ. ನಟರು ಸುಮ್ಮನೆ ತಮ್ಮ ಇಮೇಜ್ ಹಾಳಾಗುತ್ತೆ ಅಂತ ಏನೂ ಆಗದಂತೆ ಈಗ ನಟಿಸುತ್ತಿದ್ದಾರೆ ಎಂದು ಒಂದು ಕಡೆಯಿಂದ ನಂಬಿಸಲು ಹೊರಟರೆ, ಇತ್ತ ಚಿತ್ರದ ಉದಯೋನ್ಮುಖ ನಟ ವಿಶ್ವಾಸ್ ಮಾತ್ರ ಸೆಟ್ಟಿನಲ್ಲಿ ಹಾಗೆಲ್ಲಾ ನಡೆದೇ ಇಲ್ಲ. ಇದು ನಿರ್ದೇಶಕರು ಹಾಗೂ ನಿರ್ಮಾಪಕರ ಚೀಪ್ ಪಬ್ಲಿಸಿಟಿ ಗಿಮಿಕ್ಕು ಎಂದು ಖಂಡತುಂಡವಾಗಿ ಹೇಳಿದ್ದಾರೆ.
MOKSHA
ಪೆರೋಲ್ ಚಿತ್ರದ ಶೂಟಿಂಗಿನ ಆರಂಭದ ದಿನಗಳಿಂದಲೇ ಸೆಟ್‌ನಲ್ಲಿ ನಾವೆಲ್ಲರೂ ತುಂಬ ಅನ್ಯೋನ್ಯವಾಗಿದ್ದೆವು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಚಿತ್ರದ ನಿರ್ದೇಶಕ ರಾಜಶೇಖರ್ ಅವರು ಮಾಧ್ಯಮಗಳಲ್ಲಿ ಸುಲಭವಾಗಿ ಪ್ರಚಾರ ಪಡೆಯಲು ಮಾಡಿದ ಅಗ್ಗದ ಗಿಮಿಕ್. ನಾಯಕ ನಟರ ನಡುವೆ ರಿಯಲ್ ಫೈಟ್ ನಡೆದಿದೆ ಎಂದು ಸುದ್ದಿ ಹಬ್ಬಿಸಿದ್ದೇ ಅವರು. ನನಗೆ ವಿಷಯವೇ ಗೊತ್ತಿರಲಿಲ್ಲ. ಸುದ್ದಿ ಕೇಳಿ ಶಾಕ್ ಆಯಿತು. ಆದರೆ ಅವರು ತಾವು ಇಂಥ ಸುದ್ದಿ ಹಬ್ಬಿಸುವ ಮುನ್ನ ತಾವೇನು ಮಾಡುತ್ತಿದ್ದೇವೆ ಎಂದು ಯೋಚಿಸಬೇಕು. ಅದಕ್ಕೆ ಬದಲಾಗಿ ಪ್ರಚಾರಕ್ಕಾಗಿ ನಮ್ಮಂಥ ಯುವ ನಟರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಒಳ್ಳೆಯದಲ್ಲ ಎನ್ನುತ್ತಾರೆ ನಟ ವಿಶ್ವಾಸ್.
ನಾನು ಜಾಲಿಡೇಸ್ ಹಾಗೂ ಚೆಲ್ಲಿದರೂ ಸಂಪಿಗೆಯೇ ಚಿತ್ರದಲ್ಲಿ ನಟಿಸುವಾಗ ಶೂಟಿಂಗ್ ಸಮಯದಲ್ಲಿ ತುಂಬ ಎಂಜಾಯ್ ಮಾಡಿದ್ದೇನೆ. ಇಲ್ಲೂ ಕೂಡಾ ಮಾಡುತ್ತಿದ್ದೇನೆ. ಆದರೆ ಈ ರೀತಿಯ ಸುಳ್ಳು ಸುದ್ದಿಗಳು ಹಬ್ಬಿಸಿರುವುದು ನಿಜ್ಕಕೂ ಆಘಾತಕಾರಿ ಸಂಗತಿ. ನಟ ಲಿಖಿತ್ ಕೂಡಾ ನನ್ನಂತೆಯೇ ಈ ಸುದ್ದಿ ಕೇಳಿ ಶಾಕ್ ಆಗಿದ್ದಾರೆ ಎಂದೂ ವಿವರಿಸುತ್ತಾರೆ ವಿಶ್ವಾಸ್.
ನಟ ಬಿ.ಸುರೇಶ್ ಅವರು ಶೂಟಿಂಗ್ ಸಂದರ್ಭ ಯಾರೋ ಶೂಟಿಂಗ್ ವೀಕ್ಷಿಸುತ್ತಿದ್ದವರ ಕೆನ್ನೆಗೆ ಬಾರಿಸಿದರಂತೆ. ಇದರಿಂದ ಗಲಾಟೆಯುಂಟಾಗಿ ಬಿ. ಸುರೇಶ್ ಅವರಿಗೇ ನೇರವಾಗಿ ಹೊಡೆದರಂತೆ ಎಂದೂ ಪೆರೋಲ್ ಚಿತ್ರದ ಬಗ್ಗೆ ಸುದ್ದಿಯಾಗಿತ್ತು. ಈ ಬಗ್ಗೆ ವಿಶ್ವಾಸ್ ಹೇಳುವಂತೆ, ಬಿ.ಸುರೇಶರ ಬ್ಗಗೆ ಹಬ್ಬಿಸಿದ ಸುದ್ದಿಯೂ ಸುಳ್ಳು. ಅಲ್ಲಿ ಶೂಟಿಂಗ್ ಸಂದರ್ಭ ಬಂದು ವೀಕ್ಷಿಸಿದ ಅನಾಮಧೇಯ ವ್ಯಕ್ತಿ ನಿರ್ದೇಶಕರ ಗೆಳೆಯ ಎನ್ನುತ್ತಾರೆ.
ಏನೋಪ್ಪಾ... ಒಟ್ಟಾರೆ, ಪೆರೋಲ್ ಅಂತೂ ಭಾರೀ ಸುದ್ದಿಯಾದದ್ದಂತೂ ನಿಜ ಬಿಡಿ!