ಕನ್ನಡದ ಮೇರುನಟ ರಾಜ್‌ಕುಮಾರ್ ಅವರಿದ್ದ ಸದಾಶಿವನಗರದ ಮನೆ ಇನ್ನು ಕೆಲವೇ ದಿನಗಳಲ್ಲಿ ಉರುಳಲಿದೆ! ಅರ್ಥಾತ್ ನೆಲಸಮವಾಗಲಿದೆ. ಆ ಜಾಗದಲ್ಲೊಂದು ನಾಲ್ಕಂತಸ್ತಿನ ಭವ್ಯ ಬಂಗಲೆ ಎದ್ದು ನಿಲ್ಲಲಿದೆ.
ಹೌದು. ಡಾ.ರಾಜ್ ಅವರಿಗೇ ತಮ್ಮ ಜೀವಿತಾವಧಿಯಲ್ಲೊಂದು ಸದಾಶಿವನಗರದಲ್ಲಿ ಭವ್ಯ ಬಂಗಲೆ ಕಟ್ಟಿಸಬೇಕೆಂಬ ಆಸೆಯಿತ್ತು. ಆದರೆ ಅವರು ಕನಸು ನನಸು ಮಾಡಿಕೊಳ್ಳುವ ಮೊದಲೇ ಇಹಲೋಕ ತ್ಯಜಿಸಿದರು. ಈಗ ಅಪ್ಪನ ಕನಸು ನನಸು ಮಾಡುವ ಸರದಿ ಮಕ್ಕಳದ್ದು. ಅಷ್ಟೇ ಅಲ್ಲ. ಈಗಿರುವ ಮನೆ ರಾಜ್ ಕುಟುಂಬ ಬೆಳೆದಂತೆಲ್ಲಾ ಜಾಗದ ಕೊರತೆ ಅನುಭವಿಸುತ್ತಿತ್ತು. ಹಾಗಾಗಿ ಈಗಿರುವ ಮನೆ ನೆಲಸಮಗೊಳಿಸಲು ಇದೂ ಒಂದು ಕಾರಣ.
ಕನ್ನಡ ಚಿತ್ರರಂಗ ಚೆನ್ನೈನಲ್ಲಿ ನೆಲಯೂರಿದ್ದ ಕಾಲಘಟ್ಟದಲ್ಲಿ ಡಾ.ರಾಜ್ ಕುಟುಂಬ ಕೂಡಾ ಚೆನ್ನೈನಲ್ಲೇ ಇತ್ತು. ನಂತರ 80ರ ದಶಕದಲ್ಲಿ ಕನ್ನಡ ಚಿತ್ರರಂಗ ಬೆಂಗಳೂರಿಗೇ ಸ್ಥಳಾಂತರವಾದಾಗ ರಾಜ್ ಕುಟುಂಬವೂ ಬೆಂಗಳೂರಿಗೆ ಬಂತು. ಬೆಂಗಳೂರಿನಲ್ಲಿ ಸೂಕ್ತ ಮನೆ ಹುಡುಕುವ ಸಂದರ್ಭ ರಾಜ್ ಕಣ್ಣಿಗೆ ಬಿದ್ದದ್ದು ಈಗಿರುವ ಸದಾಶಿವನಗರದ ಬಂಗಲೆ. ಆಗ ಆ ಮನೆ ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಪಕರದ್ದಾಗಿತ್ತು. ಅವರು ಅದನ್ನು 16 ಲಕ್ಷ ರೂಪಾಯಿಗಳಿಗೆ ಮಾರಲು ಯೋಚಿಸಿದ್ದರಂತೆ.
ಅದೇ ಸಂದರ್ಭ ರಾಜ್‌ಕುಮಾರ್ ಅವರಿಗೆ ಈ ಮನೆಯ ಮೇಲೆ ಕಣ್ಣು ಬಿದ್ದದ್ದು ಗೊತ್ತಾಗಿ, ಅವರು ರಾಜ್ ಮೇಲಿನ ಪ್ರೀತಿಯಿಂದ 11 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದರಂತೆ. ಅಂದಿನಿಂದ ಇಂದಿನವರೆಗೆ ರಾಜ್ ಕುಟುಂಬ ಸದಾಶಿವನಗರದಲ್ಲೇ ಇದೆ. ಆದರೆ ಅಂದು ಕೊಂಡುಕೊಳ್ಳುವಾಗ ಇದ್ದದ್ದಕ್ಕಿಂತ ಈಗ ಎಷ್ಟೋ ಕೋಣೆಗಳು ಸೇರ್ಪಡೆಗೊಂಡಿವೆ ಎಂಬುದೂ ಸತ್ಯ. ರಾಜ್ ಕುಟುಂಬದ ನಿರ್ಮಾಣದ ಎಷ್ಟೋ ಚಿತ್ರಗಳೂ ಈ ಮನೆಯಲ್ಲೇ ಸೆಟ್ಟಿರಿವೆ. ಯಶಸ್ವಿಯೂ ಆಗಿವೆ.
ಈಗ ಹೊಸ ಭವ್ಯ ಬಂಗಲೆಗೆ ರಾಜ್‌ಕುಮಾರ್ ಪುತ್ರರು ಭಾರೀ ತಯಾರಿ ನಡೆಸಿದ್ದಾರಂತೆ. ಬಂಗಲೆಗೆ ತಮ್ಮ ಕನಸಿನ ಮನೆಯ ರೂಪ ಕೊಡುತ್ತಿದ್ದಾರಂತೆ. ಜತೆಗೆ ಇದು ನಾಲ್ಕಂತಸ್ತಿನ ಬಂಗಲೆಯೂ ಆಗಿರಲಿದೆ. ಐಶಾರಾಮಿ ಕೋಣೆಗಳು ಸುಸಜ್ಜಿತ ಈಜುಕೊಳ ಎಲ್ಲವೂ ಈ ಭವ್ಯ ಬಂಗಲೆಯ ನೀಲನಕಾಶೆಯಲ್ಲಿ ಸೇರಿವೆ ಎಂಬುದು ನಂಬಲರ್ಹ ಮೂಲಗಳ ಮಾಹಿತಿ.
ಸದ್ಯದಲ್ಲೇ ಈ ಕಾರ್ಯ ಆರಂಭವಾಗಲಿದ್ದು, ಮನೆ ಪೂರ್ಣಗೊಳ್ಳುವವರೆಗೆ ಗಂಗೇನಹಳ್ಳಿಯ ಬಾಡಿಗೆ ಮನೆಗೆ ರಾಜ್ ಕುಟುಂಬ ಸ್ಥಳಾಂತರಗೊಳ್ಳಲಿದೆಯಂತೆ.