ಆಪ್ತರಕ್ಷಕ ಚಿತ್ರದ ಶೂಟಿಂಗ್ ವೇಳೆ ವಿಷ್ಣುವರ್ಧನ್ ಕುದುರೆಯಿಂದ ಬಿದ್ದು ಗಾಯಗಳಾಗಿ ಹಾಸಿಗೆಯಲ್ಲಿ ಪವಡಿಸಿದ್ದು ಎಲ್ಲರಿಗೂ ಗೊತ್ತು. ಚಿತ್ರದ ನಾಯಕಿಗೂ ಏನೋ ಮೈ ಹುಷಾರು ತಪ್ಪಿ ಚಿತ್ರೀಕರಣ ತಡವಾದುದೂ ಗೊತ್ತು. ಈ ಘಟನೆಗಳಿಗೂ ಆಪ್ತಮಿತ್ರದ ನಾಗವಲ್ಲಿಗೂ ಸಂಬಂಧ ಇದೆಯಾ..?
ಗೊತ್ತಿಲ್ಲ. ಆದರೆ ಆಪ್ತರಕ್ಷಕ ಚಿತ್ರದ ಬಗ್ಗೆ ಮಾತನಾಡುವ ಸಂದರ್ಭ ಇಂತಹ ಚಿತ್ರ ವಿಚಿತ್ರ ಘಟನೆಗಳು ನಡೆದಿವೆ ಎಂದು ಸ್ವತಃ ವಿಷ್ಣುವರ್ಧನ್ ಹೇಳಿಕೊಂಡಿದ್ದು ನಿಜ. ಆದರೆ, ವಿಷ್ಣು ನೇರವಾಗಿ ಇದು ನಾಗವಲ್ಲಿಯ ಕಾಟ ಎನ್ನದಿದ್ದರೂ, ಕೆಲವು ಅನುಮಾನಾಸ್ಪದ ಘಟನೆಗಳು ನಡೆದಿವೆ ಎಂದಿದ್ದಂತೂ ನಿಜ.
ವಿಷ್ಣು ಅವರ ಮಾತಿಗೆ ಪರೋಕ್ಷವಾಗಿ ತಿವಿದದ್ದು ಆಪ್ತಮಿತ್ರ ಖ್ಯಾತಿಯ ವಿಷ್ಣು ಜತೆಗೆ ಈ ಹಿಂದೆ ಹಲವು ಚಿತ್ರಗಳಲ್ಲಿ ಜೋಡಿಯಾಗಿದ್ದ ಕುಳ್ಳ ಖ್ಯಾತಿಯ ದ್ವಾರಕೀಶ್. ಇತ್ತೀಚೆಗೆ ಕರಿಬಸವಯ್ಯ ಅವರನ್ನು ಅಭಿನಂದಿಸುವ ಸಮಾರಂಭದಲ್ಲಿ, ನಾಗವಲ್ಲಿ ಹಾಗೆಲ್ಲಾ ಕಾಡಬಹುದಿದ್ದರೆ, ನೇರವಾಗಿ ನನ್ನ ಆಪ್ತಮಿತ್ರ ಚಿತ್ರವನ್ನೇ ಕಾಡಬಹುದಿತ್ತು. ಆಗ ಕಾಡದ ನಾಗವಲ್ಲಿ ಈಗೆಲ್ಲಿ ಈ ಆಪ್ತರಕ್ಷಕನನ್ನು ಕಾಡುತ್ತಾಳೆಯೋ ನಾಕಾಣೆ. ಇಂತಹ ವಿಚಾರಗಳಿಂದ ಚಿತ್ರಕ್ಕೆ ಪ್ರಚಾರ ಪಡೆಯುವುದು ಸರಿಯಲ್ಲ. ಉತ್ತಮ ಚಿತ್ರವಾಗಿದ್ದರೆ ಖಂಡಿತ ಜನ ಬರುತ್ತಾರೆ. ಅದಕ್ಕೆ ಇಂತಹ ತಂತ್ರ ಮಾಡುವ ಅಗತ್ಯವಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ.
MOKSHA
ಅಷ್ಟೇ ಅಲ್ಲ. ಅನವಶ್ಯಕವಾಗಿ ನಾಗವಲ್ಲಿಯ ಹೆಸರಿನಿಂದ ಭಯ ಸೃಷ್ಟಿಸುವುದು ತಪ್ಪು. ಇಲ್ಲಿ ನಾಗವಲ್ಲಿಯ ಹೆಸರೆತ್ತುವ ಅಗತ್ಯವೇ ಇಲ್ಲ. ಸರಿಯಾಗಿ ಕುದುರೆ ಓಡಿಸಲು ಬರದೆ ಕುದುರೆ ಹತ್ತಿ ಬಿದ್ದರೆ ಅದ್ಕಕೆ ನಾಗವಲ್ಲಿ ಹೇಗೆ ತಾನೇ ಕಾರಣಳಾಗುತ್ತಾಳೆ? ನಾಯಕಿಗೆ ಏನೋ ಹೆಚ್ಚು ಕಡಿಮೆಯಾಗಿ ಮೈಹುಷಾರು ತಪ್ಪಿದರೆ ಅದಕ್ಕೆ ನಾಗವಲ್ಲಿ ಯಾಕೆ ಹೊಣೆ ಹೊರಬೇಕು? ಇಂಥ ಇಲ್ಲಸಲ್ಲದ ವಾತಾವರಣದಲ್ಲಿ ನಾಗವಲ್ಲಿಯ ಹೆಸರೆತ್ತಿ ಚಿತ್ರಕ್ಕೆ ಪ್ರಚಾರ ಪಡೆಯುವುದು ತಪ್ಪು ಎಂದರು ದ್ವಾರಕೀಶ್.
ಈ ಹಿಂದೆ ಆಪ್ತರಕ್ಷಕ ಚಿತ್ರದ ಶೂಟಿಂಗ್ ಮುಗಿಸಿ ನಾಯಕಿ ವಿಮಲಾ ರಾಮನ್ ತಾನು ತಂಗಿದ್ದ ಹೊಟೇಲ್ ಕೊಠಡಿಯಲ್ಲಿ ಮಲಗಲು ಬಂದಾಗ ನಾಗವಲ್ಲಿಯ ನೆರಳು ಕಾಣಿಸಿತ್ತು ಎಂದು ಆಕೆ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ. ಮಧ್ಯರಾತ್ರಿ ವೇಳೆಗೂ ವಿಮಲಾಗೆ ತನ್ನ ಪಕ್ಕ ಬೆಡ್‌ನಲ್ಲಿ ಯಾರೋ ಬಂದು ಮಲಗಿದಂತಾಗಿ ಭಯವಾಗಿ ಎಚ್ಚರವಾಗಿ ನೋಡಿದರೆ ಯಾರೂ ಇರಲಿಲ್ಲ. ಹಾಗಾಗಿ ಭಯಭೀತಳಾಗಿ ವಿಮಲಾಗೆ ಕೆಲವು ದಿನಗಳ ಕಾಲ ಜ್ವರ ಬಂದು ಶೂಟಿಂಗ್‌ಗೆ ಹಾಜರಾಗಿರಲಿಲ್ಲ ಎಂದು ಸುದ್ದಿಯಾಗಿತ್ತು.
ದೇವರು, ಅತೀಂದ್ರೀಯ ಶಕ್ತಿಗಳಲ್ಲಿ ಅಪಾರ ನಂಬಿಕೆ ಹೊಂದಿರುವ ವಿಷ್ಣುವರ್ಧನ್ ಈ ಘಟನೆಗಳಿಂದ ಸ್ವಲ್ಪ ವಿಚಲಿತರಾಗಿದ್ದಾರಂತೆ. ಅತ್ತ ದ್ವಾರಕೀಶ್ ಮಾತ್ರ ನನ್ನ ಆಪ್ತಮಿತ್ರನ್ನನು ಕಾಡದ ನಾಗವಲ್ಲಿ ಅದ್ಹೇಗೆ ಆಪ್ತರಕ್ಷಕನ ಬಳಿ ಹೋಗುತ್ತಾಳೆ ಎನ್ನುತ್ತಿದ್ದಾರೆ. ಒಟ್ಟಾರೆ, ಆಪ್ತಮಿತ್ರದ ನಂತರ ಮತ್ತೆ ಹಳಸಿದ್ದ ವಿಷ್ಣು- ದ್ವಾರಕೀಶ್ ಸಂಬಂಧಕ್ಕೆ ಈಗ ಮತ್ತೆ ಹೋಮಕ್ಕೆ ತುಪ್ಪ ಸುರಿದಂತಾಗಿದೆ.