ಗಾಂಧಿನಗರಕ್ಕೆ ಪಯಣದ ಮೂಲಕ ಪ್ರವೇಶಿಸಿದ ನಿರ್ದೇಶಕ ಕಿರಣ್ ಗೋವಿ ಈಗ ಸಂಚಾರಿಯಾಗುತ್ತಿದ್ದಾರೆ. ತಮ್ಮ ನಿರ್ದೇಶನದ ಚಿತ್ರ ಸಂಚಾರಿಯ ಮೂಲಕ ಅಪರಾಧದ ದಾರಿ ತೋರಿಸುತ್ತಿದ್ದಾರೆ.
ಎ ಕ್ರಿಮಿನಲ್ ಸ್ಟೋರಿ ಎಂಬುದು ಈ ಚಿತ್ರದ ಅಡಿಬರಹ. ಹೆಸರೇ ಹೇಳುವಂತೆ ಕುಖ್ಯಾತ ಹಂತಕನೊಬ್ಬನ ಕಥೆ. ಕ್ರಿಮಿನಲ್ ಎಂದಾಕ್ಷಣ ಆತ ಮಚ್ಚು, ಲಾಂಗ್ ಹಿಡಿಯಲೇಬೇಕೆಂದೆನೂ ಇಲ್ಲ. ತನ್ನ ಚಾಕಚಕ್ಯತೆ ಮೂಲಕ ಪೊಲೀಸರ ಕಣ್ಣಿಗೆ ಮಣ್ಣೆರಚಿ, ಅಪರಾಧ ಕೃತ್ಯಗಳನ್ನು ಮಾಡುವವನು. ಅದನ್ನು ನಿರ್ದೇಶಕರು ವಿಭಿನ್ನ ರೀತಿಯಲ್ಲಿ ತೋರಿಸಿದ್ದಾರೆ.
ಈ ಚಿತ್ರದ ಮೂಲಕ ರಾಜ್ ಎಂಬ ಹೊಸ ಹುಡುಗನನ್ನು ಪರಿಚಯಿಸಿದ್ದಾರೆ. ಇವರ ಮೊದಲ ಹೆಸರು ನಾಗರಾಜ ರೆಡ್ಡಿ. ಸಂಚಾರಿಯಾಗಲು ಹೊರಟ ಇವರು ಮೊದಲೆರಡು ಅಕ್ಷರ ಹಾಗೂ ಕೊನೆಯ ಪದವನ್ನು ಕಳಚಿಕೊಂಡಿದ್ದಾರೆ. ಬಿಯಾಂಕಾ ದೇಸಾಯಿ ಸಂಚಾರಿಗೆ ಜೊತೆಯಾಗಿದ್ದಾರೆ. ಚಿತ್ರದ ಕತೆ ಕೇಳಿಯೇ ಇದೊಂದು ಚಾಲೆಂಜಿಂಗ್ ಜಾಬ್ ಎಂದು ಅನಿಸಿದೆಯಂತೆ. ಅದಕ್ಕಾಗಿಯೇ ಹೋಂವರ್ಕ್ ಮಾಡಿಕೊಂಡೇ ಕ್ಯಾಮೆರಾ ಮುಂದೆ ಬಂದಿದ್ದಾರಂತೆ. ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಸುಬ್ಬರಾಜು ಕೂಡ ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂತೂ ಚಿತ್ರತಂಡದ ಸಂಚಾರಿಯ ಸಂಚಾರ ಮುಂದುವರೆದಿದೆ. ಪ್ರೇಕ್ಷಕ ಕೂಡ ಜೊತೆಯಾಗುತ್ತಾನೋ ಎಂಬುದಕ್ಕೆ ಬಿಡುಗಡೆಯವರೆಗೆ ಕಾಯಬೇಕು.