ಆಗಂತುಕನೊಬ್ಬ ಹದಿನಾಲ್ಕು ವರ್ಷಗಳ ನಂತರ ಬೆಂಗಳೂರಿಗೆ ಆಗಮಿಸಿ ಭ್ರಷ್ಟ ಅಧಿಕಾರಿಗಳು, ಉದ್ಯಮಿಗಳ ಜೊತೆ ಆಡುವ ಕಣ್ಣಾಮುಚ್ಚಾಲೆ ಆಟವೇ ಜುಗಾರಿ. ಎಲ್ಲಾ ತೊಡಕುಗಳನ್ನು ಎದುರಿಸಿ ನಾಯಕ ಹೇಗೆ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾನೆ ಎಂಬುದೇ ಜುಗಾರಿ ಚಿತ್ರದ ಕಥೆ.
ಈ ಚಿತ್ರದ ಮೂಲಕ ಹಾಸ್ಯನಟ ನರಸಿಂಹರಾಜು ಮೊಮ್ಮಕ್ಕಳು ಗಾಂಧಿನಗರಕ್ಕೆ ಹೆಜ್ಜೆ ಇರಿಸಿದ್ದಾರೆ. ಅಣ್ಣ ಅರವಿಂದ್ ನಿರ್ದೇಶಕ, ತಮ್ಮ ಅವಿನಾಶ್, ದಿವಾಕರ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರು ನರಸಿಂಹರಾಜು ಅವರ ಅಕ್ಕನ ಮಕ್ಕಳು.
ಈಗಾಗಲೇ ಜುಗಾರಿ ಚಿತ್ರದ ಚಿತ್ರೀಕರಣ ಮುಗಿದಿದೆ. ನಿರ್ದೇಶಕ ಅರವಿಂದ್ ಅವರಿಗೆ ಇದು ಚೊಚ್ಚಲ ಅನುಭವ. ಈ ಮೊದಲು ಒಳ್ಳೆಯ ಸಂಗೀತ ನಿರ್ದೇಶಕರಾಗಬೇಕೆಂಬ ಕನಸು ಹೊತ್ತಿದ್ದ ಅರವಿಂದ್ ನಿರ್ದೇಶಕರಾಗಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಲಿರುವಂತೆ ವಿಲನ್, ಹೀರೋ ಎಂಬ ಪದ್ಧತಿಯನ್ನು ಇಲ್ಲಿ ಅರವಿಂದ್ ಬ್ರೇಕ್ ಮಾಡಿದ್ದಾರಂತೆ. ಚಿತ್ರಕ್ಕೆ ಹರ್ಷಿಕಾ ಪೂಣಚ್ಚ ನಾಯಕಿ. ಈಕೆಗಿದು ಎರಡನೇ ಚಿತ್ರ. ಈ ಮೊದಲು ಪಿಯುಸಿ ಚಿತ್ರದಲ್ಲಿ ನಟಿಸಿದ್ದರು. ಅಂದ ಹಾಗೆ ಚಿತ್ರಕ್ಕೆ ನಿರ್ಮಾಣದ ಜೊತೆಗೆ ಕಥೆಯನ್ನು ಬರೆದಿದ್ದಾರೆ ಜಿ.ಆರ್. ರಮೇಶ್. ಅವರೇ ಹೇಳುವಂತೆ ಚಿತ್ರಕ್ಕೆ ಕಥೆ ಹೊಳೆಯಲು ದಿನಪತ್ರಿಕೆಗಳೇ ಪ್ರೇರಣೆಯಂತೆ!