ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಗುಲಾಬಿ ಟಾಕೀಸ್ ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತೊಂದು ಚಿತ್ರ ನಿರ್ದೇಶನದಲ್ಲಿ ತೊಡಗಿದ್ದಾರೆ. ಇವರ ಜೊತೆಗೆ ಕಲಾತ್ಮಕ ಚಿತ್ರ ನಿರ್ಮಾಣದಲ್ಲಿ ಹ್ಯಾಟ್ರಿಕ್ ಸಾಧಿಸಿರುವ ಬಸಂತ್ ಕುಮಾರ್ ಪಾಟೀಲ್, ಇತ್ತೀಚೆಗಷ್ಟೇ ರಾಷ್ಟ್ತ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಟಿ ಉಮಾಶ್ರೀ, ದ್ವೀಪ ಎಂಬ ಚಿತ್ರಕ್ಕೆ ರಾಷ್ಟ್ತ್ರಪ್ರಶಸ್ತಿ ಬಾಚಿಕೊಂಡ ಛಾಯಾಗ್ರಾಹಕ ಎಚ್.ಎಮ್. ರಾಮಚಂದ್ರ ಜೊತೆಯಾಗುತ್ತಿದ್ದಾರೆ.
ಗಿರೀಶ್ ಕಾಸರವಳ್ಳಿ ಅವರು ಅಮರೇಶ್ ನುಗಡೋಣಿಯವರ ಸವಾರಿ ಎಂಬ ಹೆಸರಿನ ಕಥೆಯ ಆಧಾರದಲ್ಲಿ ಕೆಲವು ಬದಲಾವಣೆಗಳೊಂದಿಗೆ ಚಿತ್ರಕಥೆ ಹೆಣೆದಿದ್ದಾರೆ. ಚಿತ್ರಕ್ಕೆ ಕನಸೆಂಬ ಕುದುರೆಯನೇರಿ ಎಂದು ಹೆಸರಿಟ್ಟಿದ್ದಾರೆ. ಸಮುದಾಯದ ಅಂಚಿನಲ್ಲಿ ಬರುವ ಒಂದು ಬಡ ಕುಟುಂಬದ ಕಥೆ. ಎರಡು ಆಯಾಮದಲ್ಲಿ ಕಥೆ ಸಾಗುತ್ತದೆ. ಇದನ್ನು ಸೂಕ್ತವಾಗಿ ನಿರ್ವಹಿಸಿ, ಸಿನಿಮಾ ಮಾಡುವುದೂ ಚಾಲೆಂಜಿಂಗ್ ಆದ ವಿಷಯ ಎನ್ನುತ್ತಾರೆ ಕಾಸರವಳ್ಳಿ.
ನಾಯಕ ಪ್ರಧಾನವಾದ ಈ ಚಿತ್ರದ ಕೇಂದ್ರ ಬಿಂದು ರಂಗಭೂಮಿಯಿಂದ ಬಂದ ಬಿರಾದಾರ್. ಇಲ್ಲಿಯ ತನಕ ಭಿಕ್ಷುಕ, ಕುಡುಕ, ಪೊಲೀಸ್ ಪೇದೆ ಪಾತ್ರಗಳನ್ನೇ ಹೆಚ್ಚಾಗಿ ಮಾಡಿದ್ದ ಬೀರಾದಾರ್‌ಗೆ ಇಲ್ಲೊಂದು ವಿಶೇಷ ಪಾತ್ರದ ಅವಕಾಶ ಒದಗಿಸಿದ್ದಾರೆ ಕಾಸರವಳ್ಳಿ.