ನಟಿ ರಮ್ಯಾ ಕ್ಷಮೆ ಕೇಳುವ ಮುಖಾಂತರ ಕೊನೆಗೂ ರಮ್ಯ-ರಂಪಾಟ ಸುಖಾಂತ್ಯ ಕಂಡಿದೆ. ಆದರೆ ರಮ್ಯಾ ಕ್ಷಮೆಯಾಚಿಸಿದ ನಂತರವೂ ಆಕೆಯನ್ನು ಜಸ್ಟ್ ಮಾತ್ ಮಾತಲಿ ಚಿತ್ರದ ಇನ್ನುಳಿದ ಶೂಟಿಂಗ್‌ನಲ್ಲಿ ಬಳಸದಿರಲು ನಿರ್ದೇಶಕ, ನಟ ಸುದೀಪ್ ತೀರ್ಮಾನಿಸಿದ್ದಾರೆ.
ಶನಿವಾರ ಸಂಜೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಉಪಾಧ್ಯಕ್ಷ ರಾಕ್‌ಲೈನ್ ವೆಂಕಟೇಶ್ ನಡೆಸಿದ ಸಂಧಾನ ಸಭೆಯಲ್ಲಿ ರಮ್ಯಾ ಬಹಿರಂಗವಾಗಿ ಕ್ಷಮೆಯಾಚಿದ್ದಾರೆ. ಸುದೀಪ್ ಕೂಡಾ ಆಕೆಯ ಕ್ಷಮೆಯನ್ನು ಸ್ವೀಕರಿಸಿದ್ದಾರೆ. ಜತೆಗೆ, ಕರ್ನಾಟಕ ರಾಜ್ಯ ನೃತ್ಯ ಕಲಾವಿದರ ಸಂಘವೂ ರಮ್ಯಾರನ್ನು ಕ್ಷಮಿಸಿ ತಮ್ಮ ಬಹಿಷ್ಕಾರವನ್ನು ವಾಪಸ್ ಪಡೆದುಕೊಂಡಿದ್ದಾರೆ.
ಸಂಧಾನ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ರಮ್ಯಾ ಬಹಿರಂಗವಾಗಿ ಕ್ಷಮೆಯಾಚಿಸಿದರು. ನಾನು ಹಾಗೆ ಯಾರಿಗೂ ನೋವುಂಟು ಮಾಡಲು ಹೇಳಿರಲಿಲ್ಲ. ಏನೋ ಹೇಳಲು ಹೋಗಿ ಏನೋ ಆಗಿಬಿಟ್ಟಿತು. ನನ್ಿಂದ ಯಾರಿಗಾದರೂ ನೋವಾಗಿದ್ದರೆ ನನ್ನನ್ನು ದಯವಿಟ್ಟು ಕ್ಷಮಿಸಬೇಕು ಎಂದು ರಮ್ಯಾ ಕ್ಷಮೆಯಾಚಿಸಿದರು.
ರಮ್ಯಾ ಕ್ಷಮೆಯಾಚಿಸಿದ ನಂತರ ನಿರ್ದೇಶಕ, ನಟ ಸುದೀಪ್ ಮಾತನಾಡಿ, ಈ ಪ್ರಕರಣವನ್ನು ನಾನು ಖಂಡಿತ ಚಿತ್ರದ ಪ್ರಚಾರಕ್ಕಾಗಿ ಬಳಸಿಲ್ಲ. ನೃತ್ಯ ನಿರ್ದೇಶಕರು, ಕಲಾವಿದರನ್ನು ಹಿಯಾಳಿಸಿದರೆ ಅವರ ಪರವಾಗಿ ನಿಲ್ಲುವುದು ಚಿತ್ರದ ನಿರ್ದೇಶಕನಾದವನ ಕರ್ತವ್ಯ. ಆದರೆ ಈಗ ರಮ್ಯಾ ಕ್ಷಮೆಯಾಚಿಸಿದ್ದಾರೆ. ಇಲ್ಲಿ ಯಾರು ಗೆದ್ದರು, ಸೋತರು ಎಂಬುದು ನಮಗೆಲ್ಲ ಮುಖ್ಯವಾಗುವುದು ಬೇಡ. ಒಟ್ಟಿನಲ್ಲಿ ಸಿನಿಮಾವನ್ನು ತೊಂದರೆಯಿಲ್ಲದಂತೆ ಸರಿಯಾಗಿ ಮುಗಿಸುವುದು ಮುಖ್ಯ ಎಂದರು.
ಇದೇ ವೇಳೆ ನೃತ್ಯ ಕಲಾವಿದರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ಮಾತನಾಡಿ, ರಮ್ಯಾ ತಾವು ಮಾಡಿದ್ದು ತಪ್ಪು ಎಂದು ಅರಿತುಕೊಂಡಿದ್ದಾರೆ. ತಪ್ಪನ್ನು ಅರಿತು ಕ್ಷಮೆಯನ್ನೂ ಯಾಚಿಸಿದ್ದಾರೆ. ನಮಗ್ಯಾರಿಗೂ ಈ ಪ್ರಕರಣ ವಿವಾದದ ಸ್ವರೂಪ ತಳೆಯುವುದು ಇಷ್ಟವಿರಲಿಲ್ಲ. ಹಾಗಾಗಿ, ರಮ್ಯಾ ವಿರುದ್ಧವಾಗಿ ನಾವು ಹೂಡಿದ್ದ ಬಹಿಷ್ಕಾರವನ್ನು ವಾಪಸ್ ಪಡೆಯುತ್ತಿದ್ದೇವೆ. ಹಾಗೂ ಇನ್ನು ಮುಂದೆ ಆಕೆಯ ಚಿತ್ರಗಳಲ್ಲಿ ಭಾಗವಹಿಸುತ್ತೇವೆ ಎಂದರು.
ಆದರೆ ಕ್ಷಮೆ ಕೇಳಿದ ನಂತರವೂ ನಿರ್ದೇಶಕ ಸುದೀಪ್ ಹಾಗೂ ನಿರ್ಮಾಪಕರು ರಮ್ಯಾ ಅವರನ್ನು ಜಸ್ಟ್ ಮಾತ್ ಮಾತಲಿ ಚಿತ್ರದ ಉಳಿದ ಶೂಟಿಂಗ್‌ನಲ್ಲಿ ಬಳಸಿಕೊಳ್ಳದೇ ಇರಲು ತೀರ್ಮಾನಿಸಿದ್ದಾರೆ. ಹೀಗಾಗಿ ರಮ್ಯಾ ಜಸ್ಟ್ ಮಾತ್ ಮಾತಲಿ ಚಿತ್ರೀಕರಣದಿಂದ ಹೊರಬಿದ್ದಿದ್ದಾರೆ.