ಮೊಗ್ಗಿನ ಮನಸು ಚಿತ್ರದ ಮೂಲಕ ಚಿತ್ರರಂಗದಲ್ಲಿ ನಾಯಕ ನಟನಾಗಿ ಪರಿಚಯವಾದ ಸುಂದರ ಮೊಗದ ಯಶ್ಕೇವಲ ಒಂದೇ ದಿನದಲ್ಲಿ ಗೋಕುಲ ಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದರಂತೆ! ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇದೆ. ಯಶ್ಗೆ ಸ್ವಲ್ಪ ಡಬ್ಬಿಂಗ್ ಫೋಬಿಯಾ ಇದೆಯಂತೆ. ಈ ಬಾರಿ ಮಾತ್ರ ಆ ಫೋಬಿಯಾ ಕಾಟ ಕೊಡದೆ ಬಾಳೆಹಣ್ಣು ಸುಲಿದು ತಿಂದಂತೆ ಸುಲಭವಾಗಿ ಕೇವಲ ಒಂದೇ ದಿನದಲ್ಲಿ ಡಬ್ಬಿಂಗ್ ಮುಗಿಸಿದ್ದು ಯಶ್ಗೆ ಸಂಪೂರ್ಣ ಖುಷಿಯೂ ಆಘುವ ಜತೆಗೆ ಸಂತೃಪ್ತಿಯನ್ನೂ ತಂದಿದೆಯಂತೆ.
ಈ ಬಗ್ಗೆ ಮಾತನಾಡಿದ ಯಶ್ ಹೇಳುವುದು ಹೀಗೆ. ''ಗೋಕುಲ ಚಿತ್ರದ ಶೂಟಿಂಗ್ ಕಾರ್ಯ ಮುಗಿದಿದೆ. ಡಬ್ಬಿಂಗ್ ಕಾರ್ಯ ಕೂಡಾ ಮುಕ್ತಾಯವಾಗಿದೆ. ನನಗೆ ಮೊಗ್ಗಿನ ಮನಸು ಚಿತ್ರಕ್ಕೆ ಡಬ್ಬಿಂಗ್ ಮಾಡುವಾಗ ಪ್ರತಿ ಬಾರಿಯೂ ನೆಗಡಿಯಾಗಿ ಸ್ವರ ಬದಲಾಗುತ್ತಿತ್ತು. ಇದರಿಂದ ನನಗೆ ಡಬ್ಬಿಂಗ್ ಮುಗಿಸುವುದೇ ದೊಡ್ಡ ಕಷ್ಟವಾಯ್ತು. ಹೇಗೋ ಮುಗಿಸಿದೆ. ಈ ಬಾರಿ ಗೋಕುಲ ಚಿತ್ರಕ್ಕೂ ನನಗೆ ಅದೇ ಭಯವಿತ್ತು. ಎಲ್ಲಿ ನೆಗಡಿಯಾಗಿ ಬಿಡುತ್ತೋ ಅಂತ. ಕೊನೆಗೂ ಏನೂ ಆಗದಂತೆ ಡಬ್ಬಿಂಗ್ ಕೇವಲ ಒಂದೇ ದಿನದಲ್ಲಿ ಮುಗಿಸಿದೆ'' ಎನ್ನುತ್ತಾರೆ ಯಶ್ ಖುಷಿಯಿಂದ.
''ಗೋಕುಲ ಚಿತ್ರದ ಶೂಟಿಂಗ್ ಸಮಯ ತುಂಬ ಖುಷಿಕೊಟ್ಟಿತು. ಕಳ್ಳರ ಸಂತೆ ಚಿತ್ರದ ಶೂಟಿಂಗ್ ಕೂಡಾ ಅಷ್ಟೆ. ಮಜಾವಾಗಿತ್ತು. ಗೋಕುಲ ಚಿತ್ರವಿಡೀ ಮನರಂಜನೆ. ಅದರಲ್ಲಿ ನಾನೊಬ್ಬ ಮಹಾ ಛತ್ರಿ. ಆದರೆ ಕಳ್ಳರ ಸಂತೆ ಹಾಗಲ್ಲ. ಅದರ ಪಾತ್ರ ಸ್ವಲ್ಪ ಕಷ್ಟದ್ದು. ಅದು ನನಗೆ ಸವಾಲೊಡ್ಡಿದ ಪಾತ್ರ. ಜತೆಗೆ ಕಳ್ಳರ ಸಂತೆಯಲ್ಲಿ ನಾನು ಹಿರಿಯ ನಟರೊಂದಿಗೆ ನಟಿಸಬೇಕಿತ್ತು. ಹಿರಿಯ ನಟನಟಿಯರಾದ ಸುಧಾರಾಣಿ, ರಂಗಾಯಣ ರಘು, ಶೋಭರಾಜ್ ಅವರ ಜತೆ ನಟಿಸಿದ್ದು ಒಂದು ಅದ್ಭುತ ಅನುಭವ'' ಎನ್ನುತ್ತಾರೆ ಯಶ್.
ಸದ್ಯಕ್ಕೆ ಗೋಕುಲ ಚಿತ್ರದ ಹಾಡುಗಳಿಗೆ ಕುಣಿಯುವುದಷ್ಟೇ ಯಶ್ಗೆ ಬಾಕಿಯಿರುವ ಕೆಲಸ. ಅದು ಸೆ.22ರಿಂದ ಆರಂಭವಾಗಲಿದೆ. ಅದಾದ ನಂತರ ಹೊಸ ಚಿತ್ರವೊಂದರಲ್ಲಿ ಯಶ್ ನಟಿಸಲಿದ್ದಾರಂತೆ. ಅದಕ್ಕೆ ಅ.20ರಿಂದ ಶೂಟಿಂಗ್ ಆರಂಭವಾಗಲಿದೆ. ಅಂತೂ ಯಶ್ ಬ್ಯುಸಿ.