ಹೌದು. ಹೀಗೊಂದು ಪ್ರಶ್ನೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಪ್ರತಿಭಾವಂತ ನಟಿ ಸ್ಮಿತಾಗೆ ಕನ್ನಡದಲ್ಲಿ ಉತ್ತಮ ಅವಕಾಶ ಸಿಗಲಿಲ್ಲವೆಂದು ಕನ್ನಡದಿಂದ ದೂರವಾಗಿದ್ದಾರೆ ಎಂಬ ಸುದ್ದಿಯೀಗ ಗಾಂಧಿನಗರಿಯಲ್ಲಿ ಕೇಳಿಬರುತ್ತಿದೆ. ಈಕೆ ಅಭಿನಯಿಸಿದ ಆತ್ಮೀಯ ಚಿತ್ರ ಹೆಚ್ಚು ಸುದ್ದಿಯಾಗಲಿಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರ ಮತ್ತಷ್ಟು ಅವಕಾಶಗಳನ್ನು ತಂದುಕೊಡುತ್ತದೆ ಎನ್ನುವುದು ಹುಸಿಯಾಯ್ತು. ಇದೀಗ ಇವರು ನಟಿಸುತ್ತಿರುವ ದೀನ ಚಿತ್ರ ತೆರೆ ಬರಲು ಸಿದ್ಧವಾಗಿದೆ.
ಅದೇನೋ ಗೊತ್ತಿಲ್ಲ. ಒಟ್ಟಾರೆ ಸ್ಮಿತಾ ತಮಿಳಿಗೆ ಹಾರಿದ್ದಾರೆ. ಅವರ ಚೊಚ್ಚಲ ಚಿತ್ರ ಪೊರ್ಕಾಳಂ ತೆರೆಗೆ ಸಿದ್ಧವಾಗಿದೆ. ರಂಗಭೂಮಿ ಹಿನ್ನೆಲೆಯಿರುವ ಕನ್ನಡದ ಇನ್ನೊಬ್ಬ ಪ್ರತಿಭಾವಂತ ನಟ ಕಿಶೋರ್ ಈ ಚಿತ್ರದ ನಾಯಕ ಎನ್ನುವುದು ಗಮನಾರ್ಹ.
ಈ ಚಿತ್ರ ಕನ್ನಡದ ಅವ್ವ ಚಿತ್ರದ ಆಕೆಯ ಪಾತ್ರವನ್ನು ಹೋಲುತ್ತದೆಯಂತೆ. ಇಲ್ಲಿಯೂ ಸ್ಮಿತಾ ಹಳ್ಳಿ ಹುಡುಗಿ. ಮುಗ್ಧ ಹಳ್ಳಿ ಹುಡುಗಿ ಪಾತ್ರ. ಆದರೆ ಸವಾಲುಗಳು ಎದುರಾದಾಗ ಧೈರ್ಯದಿಂದ ಎದುರಿಸುವ ಹುಡುಗಿ. ಇದೊಂದು ಸ್ಟೈಲಿಷ್ ಚಿತ್ರ. ಮೇಕಿಂಗ್ ಅದ್ಬುತವಾಗಿದೆ ಎನ್ನುತ್ತಾರೆ ಸ್ಮಿತಾ. ಅದೇನೇ ಇರಲಿ, ಈ ಚಿತ್ರ ಯಶಸ್ಸು ಗಳಿಸಿದರೆ ಸ್ಮಿತಾ ಭವಿಷ್ಯ ಬದಲಾಗುವುದಂತೂ ಸತ್ಯ.