ಭಾರೀ ಕುತೂಹಲ ಹುಟ್ಟು ಹಾಕಿರುವ ಉಪೇಂದ್ರ ನಿರ್ದೇಶನದ ಸೂಪರ್ ಅರ್ಥ ಧ್ವನಿಸುವ ಚಿಹ್ನೆ ಹೊತ್ತ ಚಿತ್ರದ ನಿರ್ಮಾಪಕರು ಯಾರು? ಈ ಪ್ರಶ್ನೆ ಹಲವು ದಿನಗಳಿಂದ ಗಾಂಧಿ ನಗರಿಯಲ್ಲಿ ಅಡ್ಡಾಡುತ್ತಿದೆ. ಮೊದಲ ವಿಜಯ್ ಮಲ್ಯರ ಹೆಸರು ಕೇಳಿ ಬಂತಾದರೂ ನಂತರ ರಾಕ್ಲೈನ್ ವೆಂಕಟೇಶ್ ಹೆಸರೂ ಕೂಡ ಕೇಳಿ ಬರಲಾರಂಭಿಸಿತು. ಆದ್ರೆ ಇವೆಲ್ಲ ಅಂತೆ ಕಂತೆಗಳಿದ್ರೂ ಉಪೇಂದ್ರ ಮಾತ್ರ ಏನೂ ನಡೆದಿಲ್ಲವೆಂಬಂತೆ ಎಲ್ಲ ಊಹಾಪೋಹಗಳ ಪಬ್ಲಿಸಿಟಿಯನ್ನು ನೋಡುತ್ತಾ ನಗುತ್ತಾ ಸುಮ್ಮನಿದ್ರು. ಈಗ ಇನ್ನೊಂದು ಅಂತಹುದೇ ಗಾಸಿಪ್ ಗಾಳಿ ಗಾಂಧಿನಗರಿಯಲ್ಲಿ ಬೀಸುತ್ತಿದೆ.
ಈ ಬಾರಿ ಬೀಸಿದ ಗಾಳಿ ಸ್ವಲ್ಪ ಬಲವಾಗಿಯೇ ಇದೆ. ಅಷ್ಟೇ ಅಲ್ಲ. ಹಳೆಯ ಗಾಸಿಪ್ಗಳಿಗೆ ಪುಷ್ಟಿ ನೀಡುವ ಗಾಳಿಯಿದು. ಅದೇನಪ್ಪಾ ಅಂದ್ರೆ, ಉಪೇಂದ್ರ ಅವರು ಮೊನ್ನ ಮೊನ್ನೆ ಸೆ.18ಕ್ಕೆ ಬರ್ತ್ಡೇ ಸಂಭ್ರಮ ಆಚರಿಸಿಕೊಂಡಿದ್ದು ಗೊತ್ತೇ ಇದೆ. ಅವರ ಹುಟ್ಟುಹಬ್ಬಕ್ಕೆ ಶುಭಕೋರಿ ಹಲವು ಜಾಹಿರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅವುಗಳಲ್ಲಿ ಒಂದು ಜಾಹಿರಾತು ಮಾತ್ರ ಎಲ್ಲರ ಗಮನ ಸೆಳೆಯಿತು.
ಆ ಜಾಹಿರಾತಿನಲ್ಲಿ ಉಪೇಂದ್ರ ಅವರಿಗೆ ಶುಭಹಾರೈಸಿದವರ ಹೆಸರು ಇರಲಿಲ್ಲ. ಬದಲಾಗಿ ಶುಭಹಾರೈಕೆ ಎಂಬ ಬರಹದ ಕೆಳಗೆ ಒಂದು ಬಂಡೆಯ ಚಿತ್ರ, ಜತೆಗೆ ಒಂದು ಗೆರೆ ನಂತರ ತಿರುಪತಿ ವೆಂಕಟರಮಣ ದೇವರ ಚಿತ್ರವಿತ್ತು.
MOKSHA
ಗಾಂಧಿನಗರದ ಮೂಲಗಳ ಪ್ರಕಾರ, ಈ ಜಾಹಿರಾತಿನ ಮೂಲಕ ಉಪೇಂದ್ರ ತುಂಬ ಸೂಚ್ಯವಾಗಿ ತಮ್ಮ ನಿರ್ದೇಶನದ ಚಿತ್ರದ ನಿರ್ಮಾಪಕರ ಹೆಸರು ಬಹಿರಂಗಗೊಳಿಸಿದ್ದಾರೆ ಎನ್ನಲಾಗಿದೆ. ನೇರವಾಗಿ ಹೆಸರು ಬರೆಯದೇ, ಹೆಸರು ಬರೆಯುವ ಜಾಗದಲ್ಲಿ ಬಂಡೆಯ ಚಿತ್ರ, ಗೆರೆ ಹಾಗೂ ವೆಂಕಟರಮಣ ದೇವರ ಚಿತ್ರ ಉಪೇಂದ್ರ ಅವರ ಮುಂದಿನ ಚಿತ್ರದ ನಿರ್ಮಾಪಕರ ಹೆಸರು ಎನ್ನಲಾಗಿದೆ. ಬಂಡೆಗೆ ಇಂಗ್ಲೀಷಿನಲ್ಲಿ ರಾಕ್ ಎಂದೂ, ಗೆರೆಯನ್ನು ಲೈನ್ ಎಂದೂ, ತಿರುಪತಿ ವೆಂಕಟರಮಣನೇ ವೆಂಕಟೇಶ್ ಎಂದೂ ವಿಂಗಡಿಸಿದ ನಂತರ ನಿರ್ಮಾಪಕರು ರಾಕ್ಲೈನ್ ವೆಂಕಟೇಶ್ ಅವರೇ ಇರಬಹುದು ಎಂದು ಹಲವರು ಜಾಹಿರಾತಿನ ಪತ್ತೇದಾರಿ ಕೆಲಸ ಮಾಡಿ ಮೂಲ ಹುಡುಕಿದ್ದಾರೆ.
ಈಗಾಗಲೇ ಚಿತ್ರದ ಚಿತ್ರಕಥೆಯ ಕೆಲಸ ಮುಗಿಸಿ ಪೆನ್ನು ಕೆಳಗಿಟ್ಟಿದ್ದಾರೆ ಉಪ್ಪಿ. ಶ್ರೀಮತಿ ಚಿತ್ರ ಮುಗಿದ ತಕ್ಷಣ ನಿರ್ದೇಶನದ ಕೆಲಸ ಶುರು. ಆದರೆ ಚಿತ್ರದ ಒಬ್ಬನೇ ಒಬ್ಬ ಪಾತ್ರವರ್ಗವನ್ನಾಗಲೀ, ನಿರ್ಮಾಪಕರನ್ನಾಗಲೀ, ಎಳೆಯನ್ನಾಗಲೀ ಬಿಟ್ಟುಕೊಡದ ಉಪ್ಪಿಯಲ್ಲಿ ನೇರವಾಗಿ, ನಿಮ್ಮ ನಿರ್ದೇಶನದ ಚಿತ್ರದ ನಿರ್ಮಾಪಕರು ರಾಕ್ಲೈನ್ ವೆಂಕಟೇಶ್ ಅವರಾ? ಎಂದರೆ, ನೀವು ಹಾಗೆ ತಿಳಿದ್ರೆ ಹಾಗೆ ಅಂದುಕೊಳ್ಳಿ ಅಂತ ಅಡ್ಡಗೋಡೆ ಮೇಲೆ ದೀಪವಿಡುತ್ತಾರೆ. ಏನೋಪ್ಪಾ, ಎಲ್ಲದಕ್ಕೂ ಕಾಯಬೇಕು ಬಿಡಿ.