ಮಾಜಿ ಭಾರತ ಸುಂದರಿ ಸೆಲಿನಾ ಜೇಟ್ಲಿ ಉಪೇಂದ್ರ ಜತೆಗೆ ಶ್ರೀಮತಿ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಸೆಲಿನಾಳೇ ಹೇಳುವಂತೆ, ಇದು ಆಕೆಯ ಚಿತ್ರರಂಗದ ಜೀವನದಲ್ಲಿ ದೊರೆತ ಅತ್ಯುತ್ತಮ ಪಾತ್ರ. ಆದರೆ ಕನ್ನಡ ಭಾಷೆ ಕಲಿಯಲು ಸೆಲಿನಾ ಒದ್ದಾಡುತ್ತಿದ್ದಾರಂತೆ.
ಚಿತ್ರದಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿದೆ. ಇದು ನನ್ನ ಮೊದಲ ದಕ್ಷಿಣ ಭಾರತೀಯ ಚಿತ್ರ. ಹಿಂದಿಯಲ್ಲೂ ನನಗೆ ಇಂಥ ಪಾತ್ರಗಳು ಸಿಕ್ಕಿರಲಿಲ್ಲ. ಆದರೆ ಕನ್ನಡದಲ್ಲಿ ಡೈಲಾಗ್ ಹೇಳಲು ತುಂಬ ಕಷ್ಟವಾಗುತ್ತಿದೆ. ಆದರೆ, ಉಪೇಂದ್ರ ನನಗೆ ತುಂಬ ಸಹಾಯ ಮಾಡುತ್ತಾರೆ ಎನ್ನುತ್ತಾರೆ ಸೆಲಿನಾ.
ಕನ್ನಡ ಭಾಷೆ ಬರೋದಿಲ್ಲ. ಹಾಗಾಗಿ ನನ್ನ ಪಾತ್ರದ ಕನ್ನಡ ಸಂಭಾಷಣೆಯನ್ನು ಇಂಗ್ಲೀಷಿನಲ್ಲಿ ಬರೆದುಕೊಂಡಿದ್ದೇನೆ. ಶೂಟಿಂಗ್‌ಗೆ ಸಾಕಷ್ಟು ಅಭ್ಯಾಸ ಮಾಡಿ ಹೋಗುತ್ತೇನೆ. ನಿಜವಾಗಿಯೂ ಕನ್ನಡ ಮಾತನಾಡಬಲ್ಲವರಂತೆ ಸಂಭಾಷಣೆ ಹೇಳಲು ಪ್ರಯತ್ನಿಸುತ್ತಿದ್ದೇನೆ. ಆದರೂ ಭಾಷೆ ಗೊತ್ತಿಲ್ಲವಾದ್ದರಿಂದ ಉಚ್ಛಾರ ದೋಷವಾಗುತ್ತದೆ. ಜತೆಗೆ ಸಂದರ್ಭಕ್ಕೆ ತಕ್ಕಂತೆ ಮುಖಭಾವ ತೋರಿಸಲು ಸ್ವಲ್ಪ ಕಷ್ಟವಾಗುತ್ತಿದೆ. ಇಂಥ ಸಂದರ್ಭ, ಉಪೇಂದ್ರ ಅವರು ತುಂಬ ಸಹಾಯ ಮಾಡುತ್ತಾರೆ. ಉಚ್ಛಾರಗಳನ್ನು ಸರಿಪಡಿಸುತ್ತಾರೆ ಎಂದು ವಿವರಿಸುತ್ತಾರೆ ಸೆಲಿನಾ.
IFM
ಬೆಂಗಳೂರು ನನಗೆ ಹೊಸತಲ್ಲ. ನನ್ನ ಅಪ್ಪ ಸೇನೆಯಲ್ಲಿ ಕೆಲಸದಲ್ಲಿದ್ದುದರಿಂದ ಬೆಂಗಳೂರಿನಲ್ಲಿ ನಾವು ಕೆಲಕಾಲ ವಾಸಿಸಿದ್ದೆವು. ಈಗ ಮತ್ತೆ ಬೆಂಗಳೂರಿಗೆ ಬಂದಾಗ ತುಂಬ ಚಿರಪರಿಚಿತ ಜಾಗ ಅನಿಸುತ್ತಿದೆ. ಬ್ರಿಗೇಡ್ ರಸ್ತೆಯಲ್ಲಿ ಅಂದು ನಾನು ಶಾಪಿಂಗ್ ಮಾಡುತ್ತಿದ್ದುದು ಈಗಲೂ ನೆನಪಿಗೆ ಬರುತ್ತಿದೆ ಎನ್ನುತ್ತಾರೆ ಸೆಲಿನಾ.
ಶ್ರೀಮತಿ ಚಿತ್ರದಲ್ಲಿ ನನಗೆ ನೀಡಿದ ಪಾತ್ರ ತುಂಬ ತೂಕ ಇರುವಂಥದ್ದು. ಈ ಪಾತ್ರದ ಮಹಿಳೆಗೆ ತನ್ನದೇ ಆದ ಐಡೆಂಟಿಟಿ ಇದೆ. ಅಷ್ಟೇ ಅಲ್ಲ, ತುಂಬ ಮಹತ್ವಾಕಾಂಕ್ಷಿ ಹುಡುಗಿಯ ಪಾತ್ರವಿದು. ಹಾಗಾಗಿ ಈ ಪಾತ್ರ ನನಗೆ ತುಂಬ ಮೆಚ್ಚುಗೆಯಾಗಿದೆ ಎನ್ನುತ್ತಾರೆ ಸೆಲಿನಾ.
ಶ್ರೀಮತಿ ಚಿತ್ರ ಏಕಕಾಲಕ್ಕೆ ತೆಲುಗು ಭಾಷೆಯಲ್ಲೂ ತಯಾರಾಗುತ್ತಿದ್ದು, ಇದೇ ತಾರಾ ಬಳಗವನ್ನು ಹೊಂದಿದೆ. ಚಿತ್ರದಲ್ಲಿ ಉಪೇಂದ್ರ, ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಹಾಗೂ ಸೆಲಿನಾ ಜೇಟ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಬಾಲಿವುಡ್ ನಟರಾದ ಸಯಾಜಿ ಶಿಂದೆ, ಹಿರಿಯ ನಟ ಪ್ರೇಮ್ ಛೋಪ್ರಾ ಹಾಗೂ ತೆಲುಗು ನಟ ಕೋಟ ಶ್ರೀನಿವಾಸ ರಾವ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.