ರಮ್ಯಾ ಕಿರಿಕ್ ಪ್ರಕರಣವೇನೋ ಮುಗೀತು. ರಮ್ಯಾ ಕೂಡಾ ಕ್ಷಮೆ ಕೇಳಿದ್ರು ಅನ್ನೋದು ಬೇರೆ ವಿಚಾರ ಆದರೆ ಆ ಕಿರಿಕ್‌ನಿಂದ ಒಮ್ಮೆ ಮುರಿದುಕೊಂಡ ಮನಸ್ಸು ಬಹುಬೇಗನೆ ಸಹಜ ಸ್ಥಿತಿಗೆ ಬರೋದು ಕಷ್ಟ ಅನ್ನೋದಕ್ಕೆ ಸುದೀಪ್ ಅವರೇ ಸಾಕ್ಷಿ ಅನ್ನಬಹುದೇನೋ...
ಹೌದು. ನಿರ್ದೇಶಕ, ನಟ ಸುದೀಪ್ ಇನ್ನೂ ಆ ಕಿರಿಕ್ ಘಟನೆಯ ಗುಂಗಿನಿಂದ ಹೊರಬಂದಿಲ್ಲ. ಒಂದುವರೆ ವರ್ಷದಿಂದ ಕಷ್ಟಪಟ್ಟು ಮಾಡಿದ ಕಥೆ, ಚಿತ್ರಕಥೆಯನ್ನುಒಂದೇ ನಿಮಿಷದಲ್ಲಿ ಹಂಗಿಸಿ ಬೈದರೆ ಯಾರಿಗೆ ತಾನೇ ಬೇಸರವಾಗಲ್ಲ ಹೇಳಿ? ಹೀಗೆ ಮರು ಪ್ರಶ್ನೆ ಹಾಕೋರು ಸ್ವತಃ ಸುದೀಪ್.
ನಾನು ಒಂದುವರೆ ವರ್ಷದ ಹಿಂದೆಯೇ ಮಾಡಿಟ್ಟ ಸ್ಕ್ರಿಪ್ಟ್ ಇದು. ಅದಕ್ಕಾಗಿ ಸಾಕಷ್ಟು ಹಗಲಿರುಳು ಕಷ್ಟಪಟ್ಟಿದ್ದೇನೆ. ಪ್ರಚಾರಕ್ಕಾಗಿ ನಾನು ಬಯಸಿದ್ದರೆ ಏನೇನೋ ಮಾಡುತ್ತಿದ್ದೆ. ರಮ್ಯ ಚಿತ್ರದ ಶೂಟಿಂಗ್‌ಗೆ ತಡವಾಗಿ ಬರುತ್ತಿದ್ದರು. ಪ್ರಚಾರ ಪಡೆಯಬೇಕೆಂದಿದ್ದರೆ ನಾನು ಆಗಲೇ ರಮ್ಯ ತಡವಾಗಿ ಬರ್ತಾರೆ... ಎಂದೆಲ್ಲ ಸೇರಿಸಿ ಮಾತನಾಡಿ ವಿವಾದ ಸೃಷ್ಟಿಸುತ್ತಿದ್ದೆ. ಆದರೆ ನನಗದೆಲ್ಲ ಇಷ್ಟವಿಲ್ಲ. ಕಷ್ಟವಾದ್ರೂ ಸಹಿಸಿದೆ. ಯಾಕೆಂದ್ರೆ ಜಸ್ಟ್ ಮಾತ್ ಮಾತಲ್ಲಿ ನನ್ನ ಒಂದುವರೆ ವರ್ಷದ ಕೆಲಸದ ಫಲ. ಹಾಗಾಗಿ ನನಗದರ ಮೇಲೆ ಪ್ರೀತಿಯಿತ್ತು. ಚಿತ್ರವನ್ನು ಏನೂ ಆಗದಂತೆ ಮುಗಿಸುವುದು ನನ್ನ ಆಸೆ. ಆದರೆ ಎಷ್ಟು ದಿನ ಅಂತ ತಾಳ್ಮೆಯಿಂದಿರಲಿ ಹೇಳಿ ಎನ್ನುತ್ತಾರೆ ಸುದೀಪ್.
ನನಗೆ ಹಿಡಿಸುವ ಚಿತ್ರಗಳನ್ನು ಮಾಡುತ್ತೇನೆ. ಪಾತ್ರಗಳಿಗೆ ಅಗತ್ಯವಾದವರನ್ನು ಕರೆದು ಅಭಿನಯ ಮಾಡಿಸುತ್ತೇನೆ. ಮಾಸ್ಟರ್ ಹಿರಣ್ಣಯ್ಯರಂತಹ ಹಿರಿಯ ನಟರು ನನ್ನ ಜತೆ ಕೆಲಸ ಮಾಡಿ ಖುಷಿಯಿಂದ ಹೋಗಿದ್ದಾರೆ. ದೀಪರಂತಹ ನಟಿಯರಿಗೂ ಉತ್ತಮ ಅವಕಾಶ ನೀಡಿದ್ದೇನೆ. ವಿಷ್ಣುವರ್ಧನ್‌ರಂತಹ ಖ್ಯಾತ ಅನುಭವಿ ನಟರೂ ಕೂಡ ನನ್ನ ಜತೆ ಪ್ರೀತಿಯಿಂದ ಅಭಿನಯಿಸಿದ್ದಾರೆ. ಜಸ್ಟ್ ಮಾತ್ ಮಾತಲಿ ಚಿತ್ರಕ್ಕೆ ರಮ್ಯ ಸೂಟ್ ಆಗುತ್ತಾಳೆ ಅನಿಸಿತು. ಆಕೆಯ ಬಗ್ಗೆ ಅದೇನೇ ಆರೋಪವಿರಲಿ, ಚಿತ್ರಕ್ಕೆ ಅಗತ್ಯವಿದೆ ಅನ್ನಿಸಿದ್ದಕ್ಕೆ ಆಕೆಯನ್ನು ಕರೆದೆ. ಆದರೆ ಹೀಗೂ ಕಿರಿಕ್ ಮಾಡೋದಾ ಎಂದರು ಸುದೀಪ್.
MOKSHA
ಎಲ್ಲರಿಗೂ ಒಳ್ಳೆಯವನಾಗಿ ಇರಲು ಸಾಧ್ಯವಿಲ್ಲ. ನಾನು ನೇರವಾಗಿ ಆಡುವ ಮನುಷ್ಯ. ಇದ್ದದ್ದನ್ನು ಇದ್ದ ಹಾಗೇ ಹೇಳುತ್ತೇನೆ. ದಿನವಿಡೀ ದುಡಿಯುತ್ತೇನೆ. ಒಂದೇ ವರ್ಗಕ್ಕೆ ಸೀಮಿತವಾಗದೆ, ಎಲ್ಲ ಬಗೆಯ ಚಿತ್ರಗಳನ್ನೂ ಮಾಡುತ್ತೇನೆ. ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಾಗಲ್ಲ ಅಲ್ಲವೇ ಎಂದು ಮರುಪ್ರಶ್ನೆ ಹಾಕುತ್ತಾರೆ ಸುದೀಪ್.
ನಂ.73, ಶಾಂತಿ ನಿವಾಸ ಚಿತ್ರ ಮಾಡಿದೆ. ಚಿತ್ರ ಚೆನ್ನಾಗಿತ್ತು. ಜನರು ಇಷ್ಟಪಡಲ್ಲ. ಬೇರೆಯೇ ಮಾದರಿಯ ಚಿತ್ರಗಳನ್ನು ಕೊಟ್ಟದ್ದಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ. ಹಾಗಾಗಿ ಹಣ ಕಳೆದುಕೊಂಡೆ. ಹಾಗಾಗಿ ಇನ್ನು ಮುಂದೆ ಶಾಂತಿ ನಿವಾಸದಂಥ ಚಿತ್ರಗಳಿಗೆ ಕೈ ಹಾಕಲ್ಲ ಎನ್ನುತ್ತಾರೆ ಸುದೀಪ್.
ಸದ್ಯಕ್ಕೆ ಜಸ್ಟ್ ಮಾತ್ ಮಾತಲಿ ಚಿತ್ರದ ಹಾಡಿನ ದೃಶ್ಯದ ಶೂಟಿಂಗ್‌ಗಾಗಿ ಚಿತ್ರತಂಡ ಸುದೀಪ್ ಸೇರಿದಂತೆ ಮಲೇಷ್ಯಾ ಮೂಲಕ ಲಂಕಾವಿಗೆ ಹಾರಿದೆ. ತಂಡದಲ್ಲಿ ಖಂಡಿತವಾಗಿಯೂ ರಮ್ಯ ಇಲ್ಲ ಬಿಡಿ!!!