ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಪತ್ನಿಯ ದೂರಿನ ಅನ್ವಯ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಹೇಮಂತ್ ಕುಮಾರ್ ಬಂಧನಕ್ಕೊಳಗಾಗಿದ್ದಾರೆ.
ಹೇಮಂತ್, ಅವರ ತಂದೆ ಸುಬ್ರಹ್ಮಣ್ಯಶಾಸ್ತ್ರಿ, ತಾಯಿ ರತ್ನಾಶಾಸ್ತ್ರಿ ಹಾಗೂ ಸೋದರಿ ಚೇತನಾಕೃಷ್ಣ ಸೇರಿದಂತೆ ಕುಟುಂಬದ ಸದಸ್ಯರು ತಮಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಹೇಮಂತ್ ಪತ್ನಿ ಪ್ರಿಯದರ್ಶಿನಿ ನೀಡಿದ ದೂರಿನನ್ವಯ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಈ ಕುರಿತು ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಸತ್ಯವತಿಯವರು ಮಾಹಿತಿ ನೀಡಿದ್ದು, ಎರಡೂವರೆ ವರ್ಷದ ಹಿಂದೆ ಮದುವೆಯಾಗಿ ಗಿರಿನಗರದಲ್ಲಿ ವಾಸವಾಗಿದ್ದ ಹೇಮಂತ್ ದಂಪತಿಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯದರ್ಶಿನಿ ತವರು ಮನೆಯಲ್ಲಿ ಬಂದು ನೆಲಸಿದ್ದರು ಎಂದು ತಿಳಿಸಿದರು.
ಹೇಮಂತ್ ಮತ್ತು ಪ್ರಿಯದರ್ಶಿನಿ ಅವರು 2008ರಲ್ಲಿ ಮದುವೆಯಾಗಿದ್ದರು. ಹಿರಿಯರು ನಿರ್ಧರಿಸಿದ ಮದುವೆ ಅದಾಗಿತ್ತು. 'ನಿನಗಿಂತಲೂ ಶ್ರೀಮಂತ ಮತ್ತು ಸುಂದರ ಹುಡುಗಿ ಸಿಕ್ಕುತ್ತಿದ್ದಳು ಎಂದು ಹೇಮಂತ್ ಹೀಯಾಳಿಸುತ್ತಿದ್ದ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ' ಎಂದು ಪ್ರಿಯದರ್ಶಿನಿ ದೂರಿನಲ್ಲಿ ತಿಳಿಸಿದ್ದಾರೆ.
ಶಿವರಾಜ್ ಕುಮಾರ್-ಉಪೇಂದ್ರ ಅಭಿನಯದ ಪ್ರೀತ್ಸೆ ಚಿತ್ರದಲ್ಲಿನ 'ಪ್ರೀತ್ಸೆ.. ಪ್ರೀತ್ಸೇ'..... ಹಾಡಿನಿಂದ ಜನಪ್ರಿಯತೆಯನ್ನು ಪಡೆದಿದ್ದ ಹೇಮಂತ್ ಕುಮಾರ್ ಅವರು 'ಕಲ್ಲರಳಿ ಹೂವಾಗಿ' ಚಿತ್ರದ ಶೀರ್ಷಿಕೆ ಗೀತೆಗಾಗಿ ಪ್ರಶಸ್ತಿಯನ್ನೂ ಪಡೆದಿದ್ದರು. ಹಲವು ಸಂಗೀತಾಧಾರಿತ ಕಾರ್ಯಕ್ರಮಗಳಲ್ಲಿ ಅವರು ತೀರ್ಪುಗಾರರಾಗಿ, ಸಹ-ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕನ್ನಡದಲ್ಲಿ ರಾಜೇಶ್ ಕೃಷ್ಣನ್ ಅವರಷ್ಟೇ ಬೇಡಿಕೆ ಹೊಂದಿರುವ ಪ್ರಸಿದ್ಧ ಗಾಯಕ ಹೇಮಂತ್ ಕುಮಾರ್ ಎಂದು ಹೇಳಬಹುದು.