ಅದೊಂದು ಊರು. ಅಲ್ಲಿ ಊರನ್ನು ಕಾಪಾಡಬೇಕಿದ್ದ ಊರ ನಾಯಕನೇ ರಾಕ್ಷಸನಾಗುತ್ತಾನೆ. ತನ್ನ ಊರಿನ ಬಡ ಜನರ ಬದುಕಿನ ಮೇಲೆ ದಬ್ಬಾಳಿಕೆ ನಡೆಸುತ್ತಾನೆ. ತುತ್ತಿಗಾಗಿ ಕೈಚಾಚಿದವರ ತುತ್ತನ್ನೇ ಕಿತ್ತು ತಿನ್ನುವ ಕ್ರೂರಿಯಾಗಿರುತ್ತಾನೆ.
ಅಲ್ಲಿ ಎನಿದ್ದರೂ ಲಂಚದ್ದೇ ಕಾರುಬಾರು. ದುಡ್ಡು ಅಲ್ಲಿ ಮನುಷ್ಯರನ್ನು ಆಳುತ್ತದೆ. ಎನೇ ಇದ್ದರೂ ಅಲ್ಲಿ ಹಣದ್ದೇ ಕಾರುಬಾರು. ಹಣದ ಮುಂದೆ ಎಲ್ಲವೂ ಶೂನ್ಯವಾಗಿ ನಿಲ್ಲುತ್ತದೆ. ಇದು ಬೇಲಿಯೇ ಹೊಲ ಮೇದ ಕತೆ. ರಾಜನೇ ಕಳ್ಳನಾದರೆ ಪ್ರಜೆಗಳ ಗತಿ ಎನು? ಭ್ರಷ್ಟಾಚಾರ ಮತ್ತು ದಬ್ಬಾಳಿಕೆ ಈ ವಿಷಯದ ಕುರಿತು ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಕಥೆ ಹೆಣೆದಿದ್ದಾರೆ.
ಇದೇ ಕಥೆಯನ್ನು ಬಳಸಿಕೊಂಡು ಬೇಲಿ ಮತ್ತು ಹೊಲ ಎನ್ನುವ ಸಿನಿಮಾ ಮಾಡಲು ಹೊರಟಿರುವವರು ನಿರ್ದೇಶಕ ರಾಮ್‌ದಾಸ್ ನಾಯ್ಡು. ಕಥೆಗೆ ಚಿತ್ರಕಥೆಯನ್ನು ನಾಯ್ಡು ಅವರೇ ಆಕರ್ಷಕವಾಗಿ ಹೆಣೆದಿದ್ದಾರೆ. ಚಿತ್ರದ ತಾರಾಗಣದಲ್ಲಿ ಮೀನಾಸಂ ಅಚ್ಯುತ್, ಗಣೇಶ್ ರಾವ್ ಇದ್ದಾರೆ. ಇದೊಂದು ಉತ್ತಮವಾದ ಚಿತ್ರ ಎನ್ನುತ್ತಿದ್ದಾರೆ ನಾಯ್ಡು ಅವರು. ಎಲ್ಲರೂ ಚಿತ್ರ ಹೊರಬರುವ ಮೊದಲು ಇದೇ ಮಾತನ್ನೇ ಹೇಳೋದು. ಹಾಗಾಗಿ, ಚಿತ್ರ ಹೊರಬಂದ ಮೇಲಷ್ಟೆ ಪ್ರೇಕ್ಷಕ ಮಹಾಪ್ರಭು ಕೊಡುವ ತೀರ್ಮಾನದ ಮೇಲೆಯೇ ಎಲ್ಲವೂ ನಿಂತಿದೆ ಅನ್ನೋಣವೇ.