ಹರಿಶ್ಚಂದ್ರ ಘಾಟ್ನಿಂದ ಅರ್ಜುನ್ ಮುಕ್ತಿ ಪಡೆದಿದ್ದಾರೆ. ಅರ್ಥಾತ್, 'ಹರಿಶ್ಚಂದ್ರ ಘಾಟ್' ಚಿತ್ರದಿಂದ ನಾಯಕ ನಟ ಅರ್ಜುನ್ ಹೊರಬಂದಿದ್ದಾರೆ. ಇದುವರೆಗೆ ಚಿತ್ರದ ನಾಯಕ ನಟನಾಗಿ ಅಭಿನಯಿಸುತ್ತಿದ್ದ ಅರ್ಜುನ್ಗೆ, ಆ ಚಿತ್ರದಲ್ಲಿ ನಟಿಸಬಾರದೆಂಬ ಕಟ್ಟಪ್ಪಣೆಯನ್ನು ಅವರ ತಂದೆ ವೆಂಕಟಪ್ಪ ನೀಡಿದ್ದಾರೆ.
ಆಗಸ್ಟ್ 15ರಂದು ಈ ಚಿತ್ರವು ಮುಹೂರ್ತ ಮುಗಿಸಿದ ಬಳಿಕ ಮೂರು ದಿನದ ಶೂಟಿಂಗ್ ಕೂಡಾ ನಡೆದಿತ್ತು. ಆದರೆ ಈಗ ಅಕ್ಷಯ್ ಅಲಿಯಾಸ್ ಅರ್ಜುನ್ ತಾನು ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ಕ್ಯಾತೆ ತೆಗೆದಿದ್ದಾರೆ. ಕಾರಣ ಕೇಳಿದರೆ ತಂದೆ ವೆಂಕಟಪ್ಪ ಕೊಡುವ ಕಾರಣ, ಶ್ರೀನಿವಾಸ್ ಅವರ ಕುರಿತು ವಂಚನೆ ಪ್ರಕರಣ ಸುದ್ದಿ ಮಾದ್ಯಮಗಳಲ್ಲಿ ರಾರಾಜಿಸುತ್ತಿವೆ. ಅಂಥವರ ಚಿತ್ರದಲ್ಲಿ ನನ್ನ ಮಗ ನಟಿಸುವುದು ಸರಿ ಕಾಣಿಸಲಿಲ್ಲ ಎನ್ನುತ್ತಾರೆ.
ಈಗ ಏಕಾಏಕಿ ಈ ನಿರ್ಧಾರ ಯಾಕೆ ಎಂದರೆ, ಅರ್ಜುನ್ ಈ ಚಿತ್ರದಲ್ಲಿ ನಟಿಸುತ್ತೇನೆ ಎಂದಾಗ ನನಗೆ ಈ ವಿಚಾರಗಳು ಯಾವುದು ಗೊತ್ತಿರಲ್ಲ, ಈಗ ಎಲ್ಲಾ ತಿಳಿದು ಕೂಡಾ ಇದರಲ್ಲಿ ನಟಿಸುವುದು ನನಗ್ಯಾಕೋ ಸರಿ ಕಾಣಲಿಲ್ಲ ಅದಕ್ಕೆ ಅರ್ಜುನ್ಗೆ ನಾನೇ ಬೇಡ ಅಂದೆ. ಹಾಗಾಗಿ ಅರ್ಜುನ್ ಬದಲಾಗಿ ನಾನೇ ಮಾಧ್ಯಮಗಳಿಗೆ ಅರ್ಜುನ್ ಈಚಿತ್ರದಿಂದ ಹೊರಬಂದಿದ್ದಾನೆ ಎಂದು ಹೇಳುತ್ತಿದ್ದೇನೆ ಎಂದರು ವೆಂಕಟಪ್ಪ.
ನಾಲ್ಕೈದು ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಅರ್ಜುನ್, ಅದಕ್ಕಾಗಿ ಯಾವುದೇ ಸಂಭಾವನೆ ಪಡೆದಿಲ್ಲ, ಜತೆಗೆ ಆಡ್ವಾನ್ಸ್ ಕೂಡಾ ಪಡೆದಿಲ್ಲ ಎನ್ನುತ್ತಾರೆ ಅರ್ಜುನ್. ಅದಕ್ಕಾಗಿ ಕಾರಣ ಕೇಳಿದರೆ ಅದೊಂದು ಹಳೆಯ ಕಮಿಟ್ಮೆಂಟ್ ಎಂದಷ್ಷೇ ಹೇಳಿ ಸುಮ್ಮನಾಗುತ್ತಾರೆ.
ಹರಿಶ್ಚಂದ್ರ ಘಾಟ್ ಚಿತ್ರವನ್ನು ಅಪ್ಪ ಮಗಳು ರೊಮ್ಯಾನ್ಸ್ ಮಾಡಿದ ಚಿತ್ರವೆಂದೇ ಚಿತ್ರದ ಬಿಡುಗಡೆಗೂ ಮೊದಲು ಭಾರೀ ವಿವಾದ ಸೃಷ್ಟಿಸಿದ್ದ ಶ್ರೀನಿವಾಸ್ ಅವರ ಚಿತ್ರ. ಇದರಲ್ಲೂ ನಾಯಕಿಯಾಗಿ ಶ್ರೀನಿವಾಸ್ ಮಗಳು ಶಾಲಿನಿ ನಟಿಸುತ್ತಿದ್ದಾರೆ.