ಲೂಸ್ ಮಾದ ಖ್ಯಾತಿಯ ಯೋಗಿ ಜತೆಗೆ ದಿನವೂ ಥಳಕು ಹಾಕುವ ಗಾಸಿಪ್‌ಗಳಿಗೇನು ಲೆಕ್ಕವೇ ಇಲ್ಲ. ಅದೂ ನಟಿಯರ ಜತೆಗಿನ ಗಾಸಿಪ್ಪು ಸ್ವಲ್ಪ ಹೆಚ್ಚೇ. ಅಥವಾ ಅರುವ ಗಾಸಿಪ್‌ಗಳೆಲ್ಲ ನಟಿಯರ ಜತೆಗಿನ ಕುರಿತಾದದ್ದೇ ಎಂದರೂ ತಪ್ಪಿಲ್ಲ. 16ರ ಹರೆಯದ ಪ್ರಜ್ಞಾ ಎಂಬ ನಟಿಯಿಂದ ಹಿಡಿದು ಪ್ರಣೀತಾವರೆಗೆ ಗಾಂಧಿನಗರಿಯಲ್ಲಿ ಗುಸುಗುಸು, ಪಿಸು ಪಿಸು ಇದ್ದದ್ದೇ. ಇಂತಿಪ್ಪ ಯೋಗೀಶ್‌ಗೆ ಸದ್ಯಕ್ಕೆ ಮದ್ವೆಯಾಗಲೂ ಇಷ್ಟವಿಲ್ಲ, ಲವ್ ಮಾಡಲೂ ಮನಸಿಲ್ಲ. ಅದಕ್ಕೆಲ್ಲ ಟೈಮೂ ಇಲ್ಲ!!!
ಹಾಗಂತ ಅವರೇ ಹೇಳಿದ್ದಾರೆ. ಪತ್ರಿಕೆಗಳು ದಿನವೂ ಇಂಥದ್ದನ್ನು ನೂರೆಂಟು ಬರೆಯುತ್ತಿವೆ. ಅದರ ಬಗ್ಗೆ ತಲೆಕೆಡಿಸಿಕೊಂಡರೆ ನೆಮ್ಮದಿ ಹಾಳಾಗುತ್ತೆ. ಅವುಗಳ ಸಹವಾಸವೇ ಬೇಡ ಎನ್ನುತ್ತಾರೆ ಯೋಗಿ. ಹಾಗಾದರೆ ಬೆಂಕಿಯಿಲ್ಲದೆ ಹೊಗೆಯಾಡೋದಾದ್ರೂ ಹೇಗೆ ಎಂದರೆ ಅದಕ್ಕೆ ವಿರುದ್ಧವಾಗಿ ಯೋಗಿ, ಹೌದು ರೀ, ಬೆಂಕಿಯಿಲ್ಲದೆಯೇ ಪತ್ರಿಕೆಯವರು ಹೇಗೆ ಹೊಗೆ ಹುಟ್ಟಿಸ್ತಾರೋ ಗೊತ್ತಾಗಲ್ಲ ಎಂದು ಥಟ್ಟನೆ ಉತ್ತರಿಸ್ತಾರೆ.
ಇತ್ತೀಚೆಗೆ ಪ್ರಜ್ಞಾ ಜತೆಗೆ ಯೋಗಿ ಮದುವೆಯಂತೆ. ಎರಡೂ ಮನೆಯ ಹೆತ್ತವರಲ್ಲಿ ಮಾತುಕತೆಯೂ ನಡೆದಿದೆ ಎಂದು ಸುದ್ದಿಯಿತ್ತು. ಅದಕ್ಕೆ ಯೋಗಿ, ಆತನ ಹೆತ್ತವರು ಎಲ್ಲಾ ಅಂಥದ್ದೇನು ನಡೆದೇ ಇಲ್ಲ ಎಂದು ಸಮಜಾಯ್ಸಿ ಕೊಟ್ಟಿದ್ದು ಮುಗಿದ ಕಥೆ. ಅಷ್ಟರಲ್ಲಿ ಮೊನ್ನೆ ಮೊನ್ನೆ ಯೋಗೀಶ್ ಅವರ ಹೋಂ ಪ್ರೊಡಕ್ಷನ್ ಚಿತ್ರ 'ಯಕ್ಷ'ಕ್ಕೆ ಪ್ರಣೀತಾ ಎಂಬ ಚೆಲುವೆಯ ಆಯ್ಕೆಯಾದಾಗಲೂ ಗಾಂಧಿನಗರದಲ್ಲಿ ಮ್ತತೆ ಅದೇ ಗುಸುಗುಸು ಶುರುವಾಯಿತು. ಪ್ರಜ್ಞಾಳೇ ಬೇಕೆಂದು ಯೋಗಿ ತನ್ನ ಸಿನಿಮಾಕ್ಕೆ ಆಕೆಯನ್ನು ನಾಯಕಿಯನ್ನಾಗಿ ಹಾಕಿಸಿಕೊಂಡ ಎಂಬ ಸುದ್ದಿಯೂ ಇದೆ.
ಅಕ್ಕತಂಗೀರ ಜತೆಗೆ ಸಿನಿಮಾ ನೋಡಲು ಹೋದ್ರೆ ಕೂಡಾ ಬರೀತಾರೆ. ಏನು ಮಾಡ್ಲಿ ಹೇಳಿ? ಯಾರು ಬೇಕಾದ್ರೂ ನನ್ನ ಬಗ್ಗೆ ಬರೆಯಲಿ, ನಾನೇನು ಕೇರ್ ಮಾಡೋದೇ ಇಲ್ಲ ಬಿಡಿ ಎನ್ನುವ ಯೋಗೀಶ್, ನನಗಿನ್ನೂ ಸಣ್ಣ ವಯಸ್ಸು. ಈಗೆಲ್ಲಾ ಮದುವೆಯಾಗಲ್ಲ. ಲವ್‌ನಲ್ಲಿ ಆಸಕ್ತಿ ಇಲ್ಲ. ಅದಕ್ಕೆಲ್ಲ ಟೈಮೂ ಇಲ್ಲ ಬಿಡಿ ಎಂದು ಮಾತು ಹಾರಿಸಿದರು.