ರಾಜ್ ಚಿತ್ರದಲ್ಲಿನ ತಮ್ಮ ವೈವಿಧ್ಯಮಯ ನಟನೆ- ನೃತ್ಯ- ಸಂಭಾಷಣಾ ಶೈಲಿಯಿಂದಾಗಿ ಅಭಿಮಾನಿಗಳ ಮನಸೂರೆಗೊಂಡಿರುವ ಪುನೀತ್ ರಾಜ್‌ಕುಮಾರ್ ಈಗ ಪೃಥ್ವಿಯಾಗಲು ಹೊರಟಿದ್ದಾರೆ.
ವಿಷ್ಣುವರ್ಧನ್, ಶಿವರಾಜ್‌ಕುಮಾರ್, ಉಪೇಂದ್ರರಂಥಾ ಘಟಾನುಘಟಿಗಳ ಚಿತ್ರವನ್ನು ನಿರ್ಮಿಸಿದ ಎಂ.ಬಿ.ಬಾಬುರವರಿಗೆ ಪುನೀತ್ ಕಾಲ್‌ಶೀಟ್ ಸಿಕ್ಕಿದ್ದು, ಸದ್ಯದಲ್ಲಿಯೇ ಚಿತ್ರ ಸೆಟ್ಟೇರಲಿದೆ.
ತೆಲುಗಿನ ಗಮ್ಯಂ ಚಿತ್ರವನ್ನು ಕನ್ನಡದಲ್ಲಿ ಸವಾರಿ ಎಂಬ ಚಿತ್ರವಾಗಿಸಿ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದ ನಿರ್ದೇಶಕ ಜೇಕಬ್ ವಗೀಸ್‌ರಿಗೆ ಚಿತ್ರದ ನಿರ್ದೇಶನದ ಹೊಣೆಯನ್ನು ಹೊರಿಸಲಾಗಿದೆ. ಅದೇ ರೀತಿಯಲ್ಲಿ ಸಂಗೀತದ ಸಾರಥ್ಯ ಮಣಿಕಾಂತ್ ಕದ್ರಿಯವರ ಹೆಗಲೇರಿದೆ. ಮಣಿಕಾಂತ್ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಮಗ ಎಂಬುದಿಲ್ಲಿ ಗಮನಾರ್ಹ.
ವೀರ ಕನ್ನಡಿಗ ಚಿತ್ರವನ್ನು ಹೊರತುಪಡಿಸಿದರೆ, ಪುನೀತ್ ಅವರ ಸರಿಸುಮಾರು ಎಲ್ಲಾ ಚಿತ್ರಗಳೂ ದಾಖಲೆಯ ಗಳಿಕೆಯನ್ನೇ ತೋರಿಸಿಕೊಟ್ಟಿವೆ. ಪ್ರೇಮ್ ನಿರ್ದೇಶನದ ರಾಜ್ ಚಿತ್ರದ ಕುರಿತಾಗಿ ಈ ಮೊದಲು ಒಂದಷ್ಟು ಆತಂಕಗಳು ಇದ್ದವಾದರೂ, ಅದು 50 ದಿನಗಳ ಪ್ರದರ್ಶನ ಕಂಡಿರುವುದರಿಂದಾಗಿ, ಸದ್ಯದ ಮಾರುಕಟ್ಟೆಯಲ್ಲಿ ಪುನೀತ್ ಅವರೇ ಸೇಫ್ ಬೆಟ್ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ನಟ- ನಿರ್ಮಾಪಕ- ನಿರ್ದೇಶಕ- ಸಂಗೀತ ನಿರ್ದೇಶಕರ ಕಾಂಬಿನೇಷನ್‌ನಲ್ಲಿ ಬರಲಿರುವ ಪೃಥ್ವಿ ಚಿತ್ರ ಸಹಜವಾಗಿಯೇ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.