ತಮ್ಮ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ರಾಜ್- ದಿ ಶೋ ಮ್ಯಾನ್' ಚಿತ್ರಕ್ಕೆ ಮತ್ತು ಅದರ ಯಶಸ್ಸಿಗೆ ಚಿತ್ರೋದ್ಯಮದ ಹಾಗೂ ಮಾಧ್ಯಮಗಳ ಕೆಲವೊಂದು ಹಿತಾಸಕ್ತಿಗಳು ಅಡ್ಡಗಾಲು ಹಾಕಿದ್ದಾರೆ ಎಂದು ನಿರ್ದೇಶಕ ಪ್ರೇಮ್ ತಮ್ಮ ಅಳಲ ತೋಡಿಕೊಂಡಿದ್ದಾರೆ.
ಪುನೀತ್‌ರವರ ಈ ಹಿಂದಿನ ಮಿಲನ ಮತ್ತು ವಂಶಿ ಚಿತ್ರಗಳು ಕೆಲವೊಂದು ಪ್ರದೇಶಗಳಲ್ಲಿ ಗಳಿಸಿದ ಗಳಿಕೆಯನ್ನು ರಾಜ್ ಚಿತ್ರವು ಎರಡೇ ವಾರಗಳಲ್ಲಿ ಗಳಿಸಿದೆ. ಸಂಗೀತ, ಸಾಹಿತ್ಯ, ಸಂಭಾಷಣೆ, ಛಾಯಾಗ್ರಾಹಣ ಹೀಗೆ ಎಲ್ಲ ವಿಭಾಗಗಳೂ ಜನರಿಗೆ ಮೆಚ್ಚುಗೆಯಾಗಿವೆ. ಇಷ್ಟಿದ್ದರೂ ಸಹ ಅದೊಂದು ಡಬ್ಬಾ ಚಿತ್ರ ಎಂದು ಬಿಂಬಿಸಲು ಹೊರಟಿರುವವರ ಉದ್ದೇಶವೇ ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರೇಮ್ ತನ್ನ ಹಿತೈಷಿಗಳೊಬ್ಬರ ಬಳಿ ದುಃಖದಿಂದ ಹೇಳಿದ್ದಾರೆ.
ಪರಭಾಷೆಗಳಿಂದ ಚಿತ್ರ ನಿರ್ದೇಶನಕ್ಕೆ ಆಫರ್ ಬಂದಾಗಲೂ ಸಹ, ಅದನ್ನು ನಿರಾಕರಿಸಿ ಕನ್ನಡದಲ್ಲೇ ಮುಂದುವರಿಯಲು ಬಯಸಿರುವ ನನಗೆ ಇದೊಂದು ನುಂಗಲಾರದ ತುತ್ತಾಗಿದೆ. ಮಗಧೀರ, ಶಿವಾಜಿಯಂತಹ ಚಿತ್ರಗಳಿಗೆ ಪ್ರಚಾರ ಕೊಟ್ಟಾಗ ಮೆಚ್ಚಿಕೊಳ್ಳುವ ಜನ, ನಮ್ಮದೇ ಚಿತ್ರಕ್ಕೆ ನಾವು ಪಬ್ಲಿಸಿಟಿ ಕೊಟ್ಟಾಗ ಅದೇಕೆ ಕಣ್ಣು ಕೆಂಪು ಮಾಡಿಕೊಳ್ಳಬೇಕು ಎಂದು ಪ್ರೇಮ್ ಪ್ರಶ್ನಿಸುತ್ತಾರೆ. ಈ ರೀತಿಯ ತುಳಿದುಹಾಕುವ ಪ್ರವೃತ್ತಿಯನ್ನು ತಾವು ಮೆಟ್ಟಿನಿಲ್ಲುವುದಾಗಿ ಅವರು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.