ಎಲ್ರೂ 'ಡಬ್ಬಾ' ಅಂದ್ರು. ಆದ್ರೆ ದುನಿಯಾ ಹಿಟ್ ಆಯ್ತು: ಯೋಗಿ
MOKSHA
ಈಗಲೂ ಯೋಗೀಶ್ಗೆ ನೆನಪಾಗೋದು ತನಗೆ ಚಿತ್ರಜಗತ್ತಿನಲ್ಲಿ ದಾರಿತೋರಿದ ಚಿತ್ರ ದುನಿಯಾ. ದುನಿಯಾದ ಬಗ್ಗೆ ಮಾತಾಡೋವಾಗ ಅವರು ಭಾವುಕರಾಗುತ್ತಾರೆ. ದುನಿಯಾ ಚಿತ್ರ ಮಾಡೋವಾಗ ಎಲ್ರೂ ಡಬ್ಬಾ ಚಿತ್ರ ಎಂದು ಮೂದಲಿಸಿದ್ರು. ಆದ್ರೆ ಅದೇ ಚಿತ್ರ ಹಿಟ್ ಆಯಿತು. ಎಲ್ಲರೂ ಮೂಗಿನ ಮೇಲೆ ಬೆರಳಿಟ್ರು. ಇದು ಆ ಚಿತ್ರದಲ್ಲಿದ್ದ ಅನೇಕರಿಗೆ ಚಿತ್ರರಂಗದಲ್ಲಿ ಬ್ರೇಕ್ ನೀಡಿತು ಎನ್ನುತ್ತಾರೆ ಯೋಗೀಶ್.
ತನ್ನ ಮುಂದಿನ ಯಕ್ಷ ಚಿತ್ರದ ಬಗ್ಗೆ ಮಾತಾಡಿದ ಯೋಗಿ, ಸ್ವಂತ ನಿರ್ಮಾಣದ ಚಿತ್ರವನ್ನು ಸೂರಿ ಕೈಯಲ್ಲಿ ನಿರ್ದೇಶಿಸಬೇಕೆಂದು ಕಾದೆವು. ಆದರೆ ಅವರಿಗೆ ಸದ್ಯಕ್ಕೆ ಪುರುಸೊತ್ತಿಲ್ಲ. ತುಂಬಾ ಬ್ಯುಸಿ. ಆಮೇಲೆ ಅಂಬಾರಿ ನಿರ್ದೇಶಿಸಿದ್ದ ಅರ್ಜುನ್ರನ್ನಾದ್ರೂ ಕರೆಸೋಣ ಎಂದುಕೊಂಡೆವು. ಅವ್ರೂ ಕೂಡಾ ಬ್ಯುಸಿನೇ. ಅದೇ ಸಮಯಕ್ಕೆ ರಮೇಶ್ ಅವರು ಹೇಳಿದ ಕಥೆ ಇಷ್ಟವಾಯ್ತು. ಹಾಗಾಗಿ ಅವರ ಯಕ್ಷ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತುಕೊಂಡೆವು. ಇದರಲ್ಲಿ ರೌಡಿಸಂ ಇದೆ. ಆದ್ರೆ ಮಚ್ಚು, ಲಾಂಗು ಇಲ್ಲ. ಸ್ಲಂ ಕೂಡಾ ಇರಲ್ಲ. ದೇವ್ದಾಸ್ ಚಿತ್ರ ಮುಗಿದ ತಕ್ಷಣ ಯಕ್ಷ ಆರಂಭವಾಗುತ್ತೆ ಎಂದರು ಯೋಗೀಶ್.
ನಾನು ಅಮ್ಮನ ಬಳಿ ನಾನಾ ಪಾಟೇಕರ್ ಅವರನ್ನೊಮ್ಮೆ ನೋಡಬೇಕು ಅಂತಿದ್ದೆ. ಆದರೆ ನನಗೆ ಅವರ ಜತೆ ನಟಿಸುವ ಅವಾಶ ಯಕ್ಷದಲ್ಲಿ ಸಿಕ್ಕಿದೆ. ನಾನು ಚಿತ್ರದಲ್ಲಿ ಅವರ ಮಗನಾಗಿ ಅಭಿನಯಿಸುತ್ತೇನೆ. ಇದು ನನ್ನ ಅದೃಷ್ಟ ಎಂದಾಗ ಯೋಗಿ ಕಣ್ಣಲ್ಲಿ ಖುಷಿಯಿತ್ತು.
ಯಕ್ಷದ ನಂತರ ಒಂದು ಕಾಮಿಡಿ ಚಿತ್ರದಲ್ಲಿ ಮಾಡುತ್ತೇನೆ. ಆದರೆ ಮಿಸ್ಟರ್ ಪೇಂಟರ್ ಚಿತ್ರದಲ್ಲಿ ಅತಿಥಿ ನಟನಾಗಿ ನಟಿಸಿದ್ದಕ್ಕೆ ಪಶ್ಚಾತ್ತಾಪವಿದೆ. ಅವರು ಹೇಳುವಾಗ ಒಂದು ಹಾಡು ಹಾಗೂ ಹೆಚ್ಚು ದೃಶ್ಯಗಳಿವೆ ಎಂದಿದ್ರು. ಅಂತಹ ಚಿತ್ರದಲ್ಲಿ ನಟಿಸುವಂಥ ತಪ್ಪು ಇನ್ನೊಮ್ಮೆ ಮಾಡಲ್ಲ ಎಂದರು ಯೋಗೀಶ್.