ಇತ್ತೀಚೆಗಷ್ಟೇ ಬಿ.ಸಿ. ಪಾಟೀಲರ ಸೆಲ್ಯೂಟ್ ತೆರೆಕಂಡಿದೆ. ಕ್ಯಾಮೆರಾ ಹಿಂದೆ, ಮುಂದೆ, ಎಲ್ಲೆಡೆಯೂ ಪಾಟೀಲರೇ ಇರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಅದೇನೇ ಇರಲಿ. ಇದೀಗ ಪಾಟೀಲರು ಹೊಸದೊಂದು ಚಿತ್ರ ತಯಾರಿಸುವ ಸುಳಿವು ನೀಡಿದ್ದಾರೆ. ಅದೂ ನಿರ್ಮಾಪಕರಾಗಿ. ಹಾಗಾದರೆ ನಿರ್ದೇಶಕರು? ಪಾಟೀಲರ ಸಹೋದರ ಅಶೋಕ್ ಪಾಟೀಲ್ ನಿರ್ದೇಶನದ ಜವಾಬ್ದಾರಿ ಹೊರಲು ನಿರ್ಧರಿಸಿದ್ದಾರೆ. ಚಿತ್ರಕ್ಕೆ ಟ್ಯಾಕ್ಸಿ ಡ್ರೈವರ್ ಎಂದೂ ಹೆಸರಿಟ್ಟಾಗಿದೆ.
ಈ ಹಿಂದೆ ಜೋಕ್ ಫಾಲ್ಸ್ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿದ್ದ ಅಶೋಕ್ ಪಾಟೀಲ್, ಬಳಿಕ ಬಹುಭಾಷಾ ಚಿತ್ರವೊಂದನ್ನು ಕೈಗೆತ್ತಿಕೊಳ್ಳುವ ಸೂಚನೆ ನೀಡಿದ್ದರಾದರೂ, ಚಾಲನೆ ಸಿಕ್ಕಿರಲಿಲ್ಲ. ಈಗ ಬಿ.ಸಿ. ಪಾಟೀಲರು ಸೆಲ್ಯೂಟ್ ಹೊಡೆದು ಕನ್ನಡ ಚಿತ್ರರಂಗಕ್ಕೆ ಮತ್ತೆ ಆಗಮಿಸುತ್ತಿದ್ದಂತೆ, ಸಹೋದರನೂ ಸಿನಿಮಾದಲ್ಲಿ ಸಕ್ರಿಯರಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಇದು ಟ್ಯಾಕ್ಸಿ ಚಾಲಕನೊಬ್ಬನ ಸುತ್ತ ನಡೆಯುವ ಸಸ್ಪೆನ್ಸ್-ಥ್ರಿಲ್ಲರ್ ಕಥೆಯಂತೆ. ಇದನ್ನು ಕನ್ನಡ ಹಾಗೂ ಹಿಂದಿ ಎರಡೂ ಭಾಷೆಯಲ್ಲೂ ಚಿತ್ರ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ ಅಶೋಕ್. ಚಿತ್ರಕ್ಕೆ ಇನ್ನೂ ಕಲಾವಿದರ ಆಯ್ಕೆ ನಡೆಯಬೇಕಿದೆ. ಬಿ.ಸಿ. ಪಾಟೀಲ್ ಮತ್ತೊಮ್ಮೆ ಬಣ್ಣ ಹಚ್ಚುತ್ತಾರೆಯೋ ನೋಡಬೇಕು.