ಅಜ್ಜಿಯ ಮರಣವಾದರೂ ಕುಡಿತದ ದಾಸನಾಗಿದ್ದ ನಾಯಕನ ತಂದೆ ಕಂಠ ಪೂರ್ತಿ ಕುಡಿದು ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡು ಊರಿನ ಜನ ಬೈಯುತ್ತಾರೆ. ತನ್ನ ಅಜ್ಜಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನಾಯಕನಿಗೆ ಆ ಸಂದರ್ಭದಲ್ಲಿ ತಂದೆಯನ್ನು ಕೊಂದು ಹಾಕಿಬಿಡುವಷ್ಟು ಸಿಟ್ಟು ಬರುತ್ತದೆ. ಆದರೂ ಸಿಟ್ಟನ್ನು ಸಹಿಸಿಕೊಳ್ಳುತ್ತಾನೆ ನಾಯಕ. ಇದು ಹರೇ ರಾಮ ಹರೇ ಕೃಷ್ಣ ಚಿತ್ರಕ್ಕಾಗಿ ನಗರದ ಹಾರೋಹಳ್ಳಿಯಲ್ಲಿ ಇತ್ತೀಚೆಗೆ ಚಿತ್ರೀಕರಿಸಿದ ಚಿತ್ರದ ಒಂದು ಭಾಗ.
ಅರ್ಧಕ್ಕೆ ನಿಂತಿದ್ದ ಹರೇ ರಾಮ ಹರೇ ಕೃಷ್ಣ ಚಿತ್ರದ ಚಿತ್ರೀಕರಣ ಮತ್ತೆ ಮುಂದುವರಿದಿದೆ. ಮುರಳಿ ಅಭಿನಯದ ಶ್ರೀ ಹರಿ ಚಿತ್ರದ ಶೂಟಿಂಗ್ ಮುಗಿದಿರುವ ಹಿನ್ನೆಲೆಯಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ.
ಸಿ.ವಿ. ಅಶೋಕ್ ಕಥೆ- ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಅವರ ಸಂಗೀತ ಸಂಯೋಜನೆ ಇದೆ. ಭಾಗ್ಯದ ಬಳೆಗಾರ, ಪ್ರೇಮ್ ಕಹಾನಿ ಚಿತ್ರಕ್ಕೆ ಇಳೆಯರಾಜ ಸಂಗೀತ ಸಂಯೋಜಿಸಿದ್ದರು. ಅದೇಕೋ ಏನೋ ಈ ಎರಡೂ ಚಿತ್ರಗಳ ಹಾಡುಗಳು ನಿರೀಕ್ಷಿತ ಯಶಸ್ಸು ಗಳಿಸಿಲ್ಲ. ಈಗ ಹರೇ ರಾಮ ಹರೇ ಕೃಷ್ಣವಾದರೂ ಯಶಸ್ಸಾಗುತ್ತಾ ಕಾದು ನೋಡಬೇಕು.