ಜಸ್ಟ್ ಮಾತ್ ಮಾತಲಿ ಚಿತ್ರದ ವಿವಾದದಲ್ಲಿ ಕೊನೆಗೂ ರಮ್ಯಾ ಬಹಿರಂಗವಾಗಿ ಕ್ಷಮೆ ಕೇಳಿದ್ದೂ ಆಗಿದೆ. ಇದರಿಂದ ವಿವಾದ ತಣ್ಣಗಾದರೂ ರಮ್ಯಾ ಚಿತ್ರದಿಂದ ಹೊರಬಿದ್ದಿರುವುದು ಹಳೇ ಸಂಗತಿ. ಆದರೆ, ಈಗಲೂ ಆ ವಿವಾದದ ಬಗ್ಗೆ ಮಾತೆತ್ತಿದರೆ ರಮ್ಯಾ ಹೇಳುತ್ತಿರುವುದು, 'ನನ್ನದಲ್ಲದ ತಪ್ಪಿಗೆ ಸುಮ್ಮನೆ ಕ್ಷಮೆ ಕೇಳಬೇಕಾಯ್ತು' ಎಂದು!
ಹೌದು. ಚಿತ್ರಗಳಲ್ಲಿ ಎಷ್ಟೇ ವಿವಾದಗಳು ರಮ್ಯಾ ಬೆನ್ನಿಗಂಟಿದರೂ, ಅದರ ಸುಳಿವೇ ಇಲ್ಲದಂತೆ ರಮ್ಯಾಗೆ ಒಲಿಯುವ ಅವಕಾಶಗಳಿಗೇನೂ ಕಡಿಮೆಯಿಲ್ಲ. ಒಂದಲ್ಲ ಒಂದು ರೀತಿಯ ವಿವಾದಗಳು ಇದ್ದರೂ ಸ್ಟಾರ್ ನಟರು ಅವರ ಜೊತೆ ನಟಿಸಲು ಒಲ್ಲೆ ಎಂದಿಲ್ಲ. ಅದಕ್ಕೆ ತಾಜಾ ಉದಾಹರಣೆ 'ಪೃಥ್ವಿ'. ಪುನೀತ್ ಅಭಿನಯದ ಈ ಚಿತ್ರಕ್ಕೆ ರಮ್ಯಾ ನಾಯಕಿಯಾಗಿದ್ದಾರಂತೆ.
ಹಿಟ್ ಚಿತ್ರ ಸವಾರಿಯ ಜೇಕಬ್ ವರ್ಗಿಸ್ ಈ ಚಿತ್ರದ ನಿರ್ದೇಶಕರು. ಪುನೀತ್ ಜೊತೆ ನಾಯಕಿಯಾಗಿರುವುದಕ್ಕೆ ರಮ್ಯಾ ಥ್ರಿಲ್ಲಾಗಿದ್ದಾರೆ. ಅಪ್ಪು ಜೊತೆ ರಮ್ಯಾರದ್ದು ಇದು ನಾಲ್ಕನೇ ಚಿತ್ರ. ''ನನ್ನ ಬಗ್ಗೆ ಯಾರು ಏನೇ ಹೇಳಲಿ ಕೇರ್ ಮಾಡಲ್ಲ. ಚಿತ್ರರಂಗದಲ್ಲಿ ನನ್ನ ಹಿತೈಷಿಗಳು ಸಾಕಷ್ಟು ಜನರಿದ್ದಾರೆ. ನನ್ನ ಅರ್ಥ ಮಾಡಿಕೊಂಡಿರುವ ಸ್ನೇಹಿತರು ಇರುವುದರಿಂದಲೇ ಈಗಲೂ ನನಗೆ ಅವಕಾಶ ಸಿಗುತ್ತಿರುವುದು'' ಎನ್ನುತ್ತಾರೆ ರಮ್ಯಾ.
MOKSHA
ಅದೆಲ್ಲ ಹಾಗಿರಲಿ, ಮತ್ತೆ ವಿಷಯಕ್ಕೆ ಬರೋಣ. ಈಗ ಈ ಕಾಂಟ್ರಾವರ್ಸಿ ಕ್ವೀನ್ ರಮ್ಯಾ ಮೊನ್ನೆ ತಾನೇ ವಿವಾದವೆದ್ದ ಜಸ್ಟ್ ಮಾತ್ ಮಾತಲಿ ಚಿತ್ರದ ಬಗ್ಗೆ ಮಾತನಾಡಲು ಇಚ್ಛಿಸುತ್ತಿಲ್ಲ. ''ಅದೊಂದು ಕೆಟ್ಟ ಕನಸು. ನನ್ನದಲ್ಲದ ತಪ್ಪಿಗೆ ನಾನು ಸಾರಿ ಕೇಳಬೇಕಾಯಿತು. ಈಗ ಆ ಸಿನಿಮಾದಿಂದ ದೂರ ಉಳಿಯಬೇಕು ಎಂದು ನಿರ್ಧರಿಸಿದ್ದೇನೆ'' ಎನ್ನುತ್ತಾರೆ ಅವರು. ವಿವಾದದಿಂದ ಚಿತ್ರದ ಪ್ರಚಾರ ಹೆಚ್ಚಳಿದೆಯೇ? ಎಂಬ ಪ್ರಶ್ನೆಗೆ ''ಪ್ರೇಕ್ಷಕರಿಗೆ ಬೇಕಾಗಿರುವುದು ಒಳ್ಳೆ ಚಿತ್ರವೇ ಹೊರತು, ವಿವಾದ ಮಾಡಿಕೊಂಡ ವಿಷಯಗಳಲ್ಲ. ಸಿನಿಮಾ ಚೆನ್ನಾಗಿದ್ದರೆ ಎಲ್ಲಾ ಚಿತ್ರಗಳನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ'' ಎಂಬುದು ಅವರ ಅಭಿಪ್ರಾಯ.
ಅಂದ ಹಾಗೆ, ಇವರ ಅಭಿನಯದ 'ಕಿಚ್ಚ-ಹುಚ್ಚ', 'ಜಸ್ಟ್ ಮಾತ್ ಮಾತಲ್ಲಿ' ಚಿತ್ರ ಬಿಡುಗಡೆ ಸಿದ್ಧವಾಗಿದೆ. ಅರಮನೆ ನಿರ್ದೇಶಕ ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ', ಪ್ರಕಾಶ್ ರೈ ಅವರ 'ನಾನು, ನನ್ನ ಕನಸು' ಚಿತ್ರಗಳು ಸೆಟ್ಟೇರಬೇಕಿದೆ. ಇದರ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಆಫರ್ ಕೂಡ ಬಂದಿದೆಯಂತೆ. ಅದೇನೇ ಇರಲಿ. ಕನ್ನಡ ಚಿತ್ರರಂಗಕ್ಕೆ ಪೂಜಾ ಗಾಂಧಿಯ ಬಿರುಗಾಳಿ ಬಂದರೂ ತನಗೇನೂ ಅವಕಾಶಗಳಿಗೆ ಕಡಿಮೆಯಿಲ್ಲ ಎಂದು ತೋರಿಸುತ್ತಿದ್ದಾಳೆ ರಮ್ಯಾ.