ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೊಂದು ಚಿತ್ರ ನಿರ್ಮಿಸಲಿರುವ 'ಕಿರಿಕ್' ಕಿಶನ್! (Kirik | Master Kishen | Care of Foot Path | Guinness Book of World Records)
ಸಣ್ಣ ವಯಸ್ಸಿನಲ್ಲೇ ಚಿತ್ರ ನಿರ್ದೇಶನ ಮಾಡುವ ಮೂಲಕ ಅತಿ ಕಿರಿಯ ನಿರ್ದೇಶಕ ಎಂದು ಗಿನ್ನಿಸ್ ದಾಖಲೆ ಬರೆದ ಕನ್ನಡದ ಕಿಶನ್ ಈಗ ಮತ್ತೊಂದು ಚಿತ್ರ ನಿರ್ದೇಶನ ಮಾಡಲು ಹೊರಟಿದ್ದಾನೆ. ಫೈಟ್, ಥ್ರಿಲ್ಲರ್ ಅಂಶಗಳ ಜತೆಗೆ ಹಾಡುಗಳನ್ನೂ ಹೊಂದಿರುವ ಮಸಾಲೆ ಚಿತ್ರವಿದು ಅನ್ನೋದೇ ಕಿಶನ್ ಚಿತ್ರದ ವಿಶೇಷ. ಚಿತ್ರಕ್ಕೆ ಕಿರಿಕ್ ಅನ್ನೋ ಹೆಸರು ಕೂಡಾ ಬಹುತೇಕ ಇಟ್ಟಾಗಿದೆ ಅಂತ ಸುದ್ದಿಯಿದೆ. ಚಿತ್ರ ಕಿಶನ್ ಅಪ್ಪ ಶ್ರೀಕಾಂತ್ ಅವರ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹೊರಬರಲಿದೆ. ಕಿಶನ್ ಸ್ವತಃ ಇದಕ್ಕೆ ಚಿತ್ರಕಥೆ ಬರೆದು ರೆಡಿಯೂ ಆಗಿದ್ದಾನೆ!
ಮೊನ್ನೆ ಮೊನ್ನೆ ತನಗಿನ್ನೂ 10 ದಾಟುವ ಮುನ್ನವೇ 'ಕೇರಾಫ್ ಫುಟ್‌ಪಾತ್' ಎಂಬ ಚಿತ್ರ ನಿರ್ದೇಶಿಸಿದ ಕಿಶನ್ ಎಂಬ ಹಾಲುಗಲ್ಲದ ಹುಡುಗನಿಗೆ ಈಗ ವಯಸ್ಸು 13 ಆಗಿದೆ. ಹಾಗಾಗಿ ಸಹಜವಾಗಿಯೇ ಬುದ್ಧಿ ಇನ್ನೂ ಬೆಳೆದಿದೆ. ಅಂತರ್ಜಾಲ ತಡಕಾಡಿ ಚಿತ್ರ ಜಗತ್ತಿನ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡು ತಾಂತ್ರಿಕವಾಗಿಯೂ ಚಿತ್ರಜಗತ್ತಿನ ಮೇಲೆ ಕಣ್ಣಾಡಿಸಲು ತೊಡಗಿದ್ದಾನೆ. ಕೇರಾಫ್ ಫುಟ್‌ಪಾತ್ ನಿರ್ದೇಶಿಸುವಾಗ ಇದ್ದ ದುಗುಡವೂ ಈಗಿಲ್ಲ. ಅದರ ಯಶಸ್ಸನ್ನು ಬೆನ್ನಿಗಿಟ್ಟುಕೊಂಡು ಕಿಶನ್‌ಗೆ ಹೆಚ್ಚು ಧೈರ್ಯ ಬಂದಿದೆ. ಹಾಗಾಗಿ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಚೊಕ್ಕಟವಾಗಿ ಓರಣ ಮಾಡಿ ಹೊಸ ಮೈಲುಗಲ್ಲು ಸೃಷ್ಟಿಸಲು ಹೊರಟಿದ್ದಾನೆ ಕಿಶನ್.
ತನ್ನ ಹೊಸ ಚಿತ್ರದ ಬಗ್ಗೆ ಕಿಶನ್ ಹೇಳೋದು ಹೀಗೆ. ''ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ಈ ಚಿತ್ರ ಹೊರಬರಲಿದ್ದು, ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಲಿದೆ. ಎಲ್ಲ ವರ್ಗದ ಜನರೂ ನೋಡಬಲ್ಲ ಕ್ಲಾಸ್ ಚಿತ್ರ ಇದಾಗಿದ್ದು, ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಸರಕೂ ಇದರಲ್ಲಿರಲಿದೆ. ಈ ಚಿತ್ರ ಮೂಲಕ ನನ್ನ ಹಳೆಯ ನಿರ್ದೇಶನದ ಚಿತ್ರಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶಾಲ ದೃಷ್ಟಿಕೋನದಿಂದ ನೋಡುತ್ತೇನೆ. ನನ್ನ ಮೊದಲ ಚಿತ್ರ ಕೇರಾಫ್ ಫುಟ್‌ಪಾತ್ ಚಿತ್ರ ಕಮರ್ಷಿಯಲ್ ಯಶಸ್ಸನ್ನು ಪಡೆದಿರುವ ಜತೆಗೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ನನ್ನ ಪ್ರಯತ್ನವನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕೂಡಾ ಗಮನಿಸಿ ಅತಿ ಕಿರಿಯ ನಿರ್ದೇಶನನೆಂಬ ಪಟ್ಟ ನೀಡಿದೆ. ನಾನು ನನ್ನ ಮೊದಲ ಚಿತ್ರ ನಿರ್ದೇಶಿಸುವಾಗ ನನಗಿನ್ನೂ 10 ವಯಸ್ಸೂ ಆಗಿರಲಿಲ್ಲ ಎನ್ನುತ್ತಾರೆ ಮಾಸ್ಟರ್ ಕಿಶನ್.
ಮಾಸ್ಟರ್ ಕಿಶನ್ ಕನ್ನಡ ಸಿನಿಮಾದಲ್ಲಿ ಖ್ಯಾತ ಬಾಲ ನಟ ಕೂಡಾ. ಸಿನಿಮಾವನ್ನು ನಿರ್ಮಿಸುವ ತಾಂತ್ರಿಕ ಪರಿಣತಿಯನ್ನು ಪುಸ್ತಕಗಳಲ್ಲಿ ಓದಿ ಕಲಿಯುವ ಹುಮ್ಮಸ್ಸು ಕಿಶನ್‌ದು. ಇಂಟರ್‌ನೆಟ್ಟಿನಲ್ಲೂ ಜಾಲಾಡಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾನೆ ಕಿಶನ್. ಕೇರಾಫ್ ಫುಟ್‌ಪಾತ್ ಚಿತ್ರ ನಿರ್ದೇಶಿಸುವ ಮೂಲಕ ಚಿತ್ರ ನಿರ್ಮಾಣದ ತಾಂತ್ರಿಕತೆಯನ್ನೂ ಸಾಕಷ್ಟು ಕಲಿತುಕೊಂಡಿರುವ ಕಿಶನ್, ನಾನು ಈಗಾಗಲೇ ಒಂದು ಚಿತ್ರಕಥೆ ಬರೆದು ಸಿದ್ಧಪಡೆಸಿಕೊಂಡಿದ್ದೇನೆ. ಈ ಚಿತ್ರ ಕೇವಲ ಕುತೂಹಲಕಾರಿಯಾಗಿಯಷ್ಟೇ ಅಲ್ಲ. ಇದು ತನ್ನ ತಾಂತ್ರಿಕ ಗುಣಮಟ್ಟದಲ್ಲೂ ಬೆನ್ನು ತಟ್ಟಿಸಿಕೊಳ್ಳಲಿದೆ ಎಂಬ ಆತ್ಮವಿಶ್ವಾಸ ಕಿಶನ್‌ದು.
ಕಿಶನ್‌ನ ಅಪ್ಪ ಶ್ರೀಕಾಂತ್ ಮಗ ಕಿಶನ್ ಜತೆಗೆ ಚಿತ್ರಕಥೆ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರಂತೆ. ಅಪ್ಪ ಶ್ರೀಕಾಂತ್ ಮಗನ ಚಿತ್ರಕಥೆಗೆ ಖುಷಿಪಟ್ಟಿದ್ದು, ಅದನ್ನು ಎಳ್ಳಷ್ಟೂ ಬಿಟ್ಟುಕೊಡಲಿಲ್ಲ. ಚಿತ್ರ ಕೇವಲ ಮಾಹಿತಿಪೂರ್ಣವಾಗಿಯಷ್ಟೇ ಅಲ್ಲ, ತುಂಬ ಮನರಂಜನೆಯ್ನನೂ ನೀಡಲಿದೆ ಎಂದು ಸ್ವಲ್ಪವೇ ಸ್ವಲ್ಪ ಮಾಹಿತಿ ಹೊರಬಿಚ್ಚಿದರು ಶ್ರೀಕಾಂತ್.
ಮಗನ ಎಲ್ಲ ಕೆಲಸಗಳಿಗೆ ಒತ್ತಾಸೆಯಾಗುವ ಕಿಶನ್‌ನ ಹೆಮ್ಮೆಯ ಅಮ್ಮ ಶ್ರೀಶೈಲ ಹೇಳುವಂತೆ, ಚಿತ್ರ ವೈಜ್ಞಾನಿಕವಾದ ಹಲವು ಅಂಶಗಳ್ನು ಹೊಂದಿದೆಯಾದರೂ, ವೈಜ್ಞಾನಿಕ ಥ್ರಿಲ್ಲರ್ ಕಥಾನಕ ಎಂದು ನಾನು ಹೇಳಲಾರೆ. ಆದರೆ ಇದು ಕಿಶನ್‌ನ ನಿರ್ದೇಶನ ಹಾಗೂ ನಟನೆ ಎರಡೂ ಕೆರಿಯರ್‌ನಲ್ಲಿ ತುಂಬ ಮುಖ್ಯವಾದ ಘಟ್ಟವನ್ನು ನೀಡುತ್ತದೆ ಎಂದು ನನಗನಿಸುತ್ತದೆ. ಈ ಚಿತ್ರದ ಮೂಲಕ ಕಿಶನ್ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ನಿರ್ಮಿಸುತ್ತಾನೆ ಎಂದರು.