ನಿಮಗೆ 'ಆ ದಿನಗಳು' ನೆನಪಿದೆಯೇ? ಹಾಗೆಂದ ಕೂಡಲೇ ನೀವು ನಿಮ್ಮ ಬಾಲ್ಯವನ್ನೋ, ವಿದ್ಯಾರ್ಥಿ ದೆಸೆಯನ್ನೋ, ಮಾವಿನಕಾಯಿ ಕದ್ದು ತಿಂದ ದಿನವನ್ನೋ, ಕಾಲೇಜಿಗೆ ಬಂಕ್ ಹೊಡೆದು ಸಿನೆಮಾಕ್ಕೆ ಅಟೆಂಡೆನ್ಸ್ ಹಾಕಿದ ದಿನಗಳನ್ನೋ ನೆನಪಿಸಿಕೊಳ್ಳುವ ಅಗತ್ಯವಿಲ್ಲ. ಹೇಳಿ-ಕೇಳಿ ಇದು ಸಿನೆಮಾ ಕಾಲಂ ಸ್ವಾಮೀ..! ನಾವು ಕೇಳಿದ್ದು ಸಿನೆಮಾ ವಿಷಯವನ್ನು..!
ಕೆ.ಎಂ.ಚೈತನ್ಯರ ನಿರ್ದೇಶನದಲ್ಲಿ ಬಂದ 'ಆ ದಿನಗಳು' ಚಿತ್ರ ಅಷ್ಟೇನೂ ಬೇಗ ಮರೆತುಹೋಗುವ ಸಿನಿಮಾವಲ್ಲ. ಅಗ್ನಿ ಶ್ರೀಧರ್ ನಿರ್ಮಾಣದ ಈ ಚಿತ್ರವು, ಅದರಲ್ಲಿ ದುಡಿದಿದ್ದ ಎಲ್ಲರಿಗೂ ಕೀರ್ತಿ ತಂದುಕೊಟ್ಟಿತ್ತು. ನವನಟ ಚೇತನ್ ಅಭಿನಯ, ಇಳಯರಾಜಾರ ಸಂಗೀತ, ಮುದ್ದಾದ ಹಾಡುಗಳು, ಛಾಯಾಗ್ರಾಹಣ, ರಾಜ್ಯಪ್ರಶಸ್ತಿಗೆ ಸಂಬಂಧಿಸಿದಂತೆ ಅದು ಹುಟ್ಟುಹಾಕಿದ ವಿವಾದ ಇವೆಲ್ಲವೂ ಚಿತ್ರರಸಿಕರ ಮನಸ್ಸಿನಲ್ಲಿ ಇನ್ನೂ ಹಸಿರಾಗಿವೆ.
ಅದೇ ಚೈತನ್ಯ ಈಗ 'ಸೂರ್ಯಕಾಂತಿ' ಎಂಬ ಸದಭಿರುಚಿಯ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದ ಬಹುಪಾಲು ಚಿತ್ರೀಕರಣ ಮುಗಿದಿದೆ. ಕಥೆ ನಡೆಯುವುದು ಬೆಳಗಾವಿಯಲ್ಲಿ. ಆ ಭಾಗದ ಚಿತ್ರೀಕರಣ ಮುಗಿದಿದ್ದು, ಈ ತಿಂಗಳು ಒಂದಷ್ಟು ಭಾಗದ ಚಿತ್ರೀಕರಣ ಮುಗಿದರೆ ಚಿತ್ರ ಸಂಕಲನಕ್ಕೆ ಅಣಿಯಾಗುತ್ತದೆ.
MOKSHA
ಚಿತ್ರದ ನಾಯಕ ಚೇತನ್. ಅಲ್ಲದೆ, ಈ ಚಿತ್ರದ ಮೂಲಕ ಮತ್ತೊಂದು ತಮಿಳು ಪ್ರತಿಭೆ ಕನ್ನಡಕ್ಕೆ ಬಂದಿದೆ. ಅದು ಚಿತ್ರದ ನಾಯಕಿ ರೆಜಿನಾ. ಕನ್ನಡದಲ್ಲಿ ಇದು ಈಕೆಯ ಮೊದಲ ಚಿತ್ರ. ತಮಿಳಿನಲ್ಲಿ ಈಗಾಗಲೇ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಂದು ಕಂಡನಾಲ್ ಮುದಲ್, ಮತ್ತೊಂದು ಅಳಗಿಯ ಅಸುರ. ಈಕೆ ತನ್ನ ಒಂಬತ್ತನೇ ವಯಸ್ಸಿನಲ್ಲಿ ತಮಿಳು ಚಿತ್ರವೊಂದರಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಐದು ವರ್ಷಗಳ ಕಾಲ ಟಿವಿ ಚಾನೆಲ್ ನಿರೂಪಕಿಯಾಗಿದ್ದರು. ನೂರಾರು ಜಾಹಿರಾತುಗಳಲ್ಲಿ ರೂಪದರ್ಶಿಯಾಗಿಯೂ ಕಾಣಿಸಿಕೊಂಡ ಅನುಭವ ಈಕೆಯ ಬೆನ್ನಿಗಿದೆ. ಪ್ರಸ್ತುತ ಅವರು ಪದವಿ ಮೊದಲ ವರ್ಷದ ವಿದ್ಯಾರ್ಥಿನಿ.
ವಾಸು-ಸುಜಾತ ದಂಪತಿಗಳು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೂಲತಃ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಾಸುರವರಿಗೆ ಸದಭಿರುಚಿಯ ಚಿತ್ರವನ್ನು ನಿರ್ಮಿಸಬೇಕೆಂಬ ಇರಾದೆಯಿದೆಯಂತೆ. ಹೀಗಾಗಿ ಸ್ಯಾಂಡಲ್‌ವುಡ್‌ಗೆ ಧುಮಿಕಿದ್ದಾರಂತೆ. ಈಗ ಈ ಚೈತನ್ಯರ ಮತ್ತೊಂದು 'ಆ ದಿನಗಳು' ಹೊರಬರಲಿದೆಯೇ?