ಸದ್ಯದಲ್ಲಿಯೇ ದೀಪಾವಳಿ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ ಶಿವಕಾಶಿ ಎಂಬ ಪದ ಕಿವಿಗೆ ಬಿದ್ದೊಡನೆಯೇ ನೆನಪಿಗೆ ಬರುವುದು ಪಟಾಕಿಯ ಶಬ್ದ ಮಾತ್ರವೇ ಎಂದರೆ ಅದು ಅಚ್ಚರಿಯ ಸಂಗತಿಯಲ್ಲ. ಆದರೆ ನಾವೀಗ ಹೇಳಹೊರಟಿರುವುದು ಪಟಾಕಿಯ ವಿಷಯವಲ್ಲ, 'ಶಿವಕಾಶಿ' ಎಂಬ ಚಿತ್ರದ ಕುರಿತಾದ ಮಾತು.
ಕಾವೇರಿ ಜಲವಿವಾದದ ಕಥೆಗೆ ಪ್ರೇಮದ ಲೇಪನವನ್ನು ಕೊಟ್ಟು ಶಿವಕಾಶಿ ಎಂಬ ಈ ಚಿತ್ರವನ್ನು ರಾಂಪ್ರಕಾಶ್ ನಿರ್ದೇಶಿಸುತ್ತಿದ್ದು, ಮಹದೇವಯ್ಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅನಂತನಾಗ್ ಹಾಗೂ ಲಕ್ಷ್ಮಿ ಜೋಡಿ ಮತ್ತೊಮ್ಮೆ ಜೋಡಿಯಾಗಿ ನಟಿಸಲಿದ್ದು ಅದು ಚಿತ್ರಪ್ರೇಮಿಗಳನ್ನು ಮತ್ತೊಮ್ಮೆ ಮಧುರ ಸ್ಮೃತಿಗೆ ಕೊಂಡೊಯ್ಯಲಿದೆ ಎನ್ನುತ್ತಾರೆ ಚಿತ್ರತಂಡದವರು.
'ಪಟ್ರೆ ಲವ್ಸ್ ಪದ್ಮ' ಚಿತ್ರದ ನಂತರ ಉತ್ತಮವಾದ ಬ್ರೇಕ್ ನಿರೀಕ್ಷೆಯಲ್ಲಿರುವ ಅಜಿತ್ ಹಾಗೂ ಮೊಗ್ಗಿನ ಮನಸು ಚಿತ್ರದಲ್ಲಿ ಚಿತ್ರಪ್ರೇಮಿಗಳ ಮನಸೆಳೆದ ಮಾನಸಿ ಈ ಚಿತ್ರದ ನಾಯಕ- ನಾಯಕಿ ಎನ್ನುತ್ತದೆ ಚಿತ್ರತಂಡ. ಹಾಸ್ಯನಟ ಶರಣ್ ಅವರ ತಂದೆ-ತಾಯಿ ಈ ಚಿತ್ರದಲ್ಲಿ ಮೊಟ್ಟಮೊದಲ ಬಾರಿಗೆ ನಟಿಸುತ್ತಿರುವುದು ಮತ್ತೊಂದು ವಿಶೇಷ.
ಈಗಾಗಲೇ ಚಿತ್ರದ ಮುಕ್ಕಾಲುಪಾಲು ಚಿತ್ರೀಕರಣ ಮುಗಿದಿದೆಯಂತೆ. ಶ್ರೀರಂಗಪಟ್ಟಣ, ಪಾಂಡವಪುರದ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಚಿತ್ರಕ್ಕೆ ಗಂಧರ್ವ ಸಂಗೀತ ನೀಡಿದ್ದರೆ, ಕೆ.ಸತೀಶ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶಿವಕಾಶಿಯ ಪಟಾಕಿಯಂತೆ ಶಿವಕಾಶಿ ಚಿತ್ರವೂ ಬೆಳ್ಳಿತೆರೆಯ ತುಂಬೆಲ್ಲಾ ತನ್ನ ಚುರುಕುತನವನ್ನು ತೋರಿಸಲಿದೆಯೇ... ಕಾಯಬೇಕು!