ರವಿಚಂದ್ರನ್ ಜತೆಗೆ ರಣಧೀರ, ಯುಗಪುರುಷ, ಶಾಂತಿ ಕ್ರಾಂತಿಗಳಲ್ಲಿ ಕಾಣಿಸಿಕೊಂಡ ದಕ್ಷಿಣ ಭಾರತೀಯ ನಟಿ, ಚೆಲುವೆ ಖುಷ್ಬೂ ಮೊನ್ನೆ ಮೊನ್ನೆ ಸಾವಿನಿಂದ ಸ್ವಲ್ಪದರಲ್ಲೇ ಪಾರಾಗಿ ಬಂದಿದ್ದಾರೆ. ಅವರ ಎದೆಬಡಿತ ಇನ್ನೂ ನಿಂತಿಲ್ಲ.
ಫೆಸಿಫಿಕ್ ಸಾಗರದಲ್ಲಿ ಸುನಾಮಿ ಸೃಷ್ಟಿಯಾಗಿ, ಸಮೊವ ಹಾಗೂ ಅಮೆರಿಕನ್ ಸಮೋವ ಪ್ರದೇಶಗಳಲ್ಲಿ ತಲ್ಲಣ ಉಂಟು ಮಾಡಿದ ಸಂಗತಿ ಗೊತ್ತೇ ಇದೆ. ಅದರ ಬೆನ್ನಲ್ಲೇ ಇಂಡೋನೇಷ್ಯಾದಲ್ಲೂ 15-20 ಅಡಿ ಇದ್ದ ಬೃಹತ್ ಗಾತ್ರದ ಸುನಾಮಿ ಅಲೆಗಳಿಗೆ ಸಾವುನೋವು ಸಂಭವಿಸಿತ್ತು. ಇದೇ ಸಂದರ್ಭ, ಇಂಡೋನೇಷ್ಯಾದ ಪಕ್ಕದ ಮಲೇಶಿಯಾದ ಪುಟ್ಟ ದ್ವೀಪದಲ್ಲಿದ್ದರು ನಟಿ ಖುಷ್ಬೂ. ಅದೂ ಕೂಡಾ ಸಮುದ್ರ ಕಿನಾರೆಯಲ್ಲೇ!
ಮೊನ್ನೆ ಮೊನ್ನೆ ವಾರದ ಕೆಳಗೆ ಮಲೇಶಿಯಾದ ಪುಲೌ ರೆಡಾಂಗ್ ದ್ವೀಪದಲ್ಲಿ ತನ್ನ ಪತಿ ನಿರ್ದೇಶಕ ಸುಂದರ್ ಅವರ ಶೂಟಿಂಗ್‌ಗೆ ತೆರಳಿದ್ದರು ಖುಷ್ಬೂ. ಸುಂದರ್ ಶೂಟಿಂಗ್‌ಗೆಂದು ಬಂದರೆ, ಖುಷ್ಬೂ ತನ್ನ ಮಕ್ಕಳ ಜತೆಗೆ ಪತಿಯಿದ್ದಲ್ಲಿಗೆ ಪ್ರವಾಸವೆಂಬಂತೆ ಬಂದಿದ್ದರು. ಕಡಲ ಕಿನಾರೆಯಿಂದ ಸ್ವಲ್ಪವೇ ದೂರದಲ್ಲಿದ್ದ ಬೃಹತ್ ಹೊಟೇಲಿನಲ್ಲಿ ಪತಿ ಸಂದರ್, ಮಕ್ಕಳು ಹಾಗೂ ಖುಷ್ಬೂ ತಂಗಿದ್ದರು. ಖುಷ್ಬೂ, ಪಿ ಸುಂದರ್ ಹಾಗೂ ಮಕ್ಕಳು ಹೊಟೇಲಿನ 29ನೇ ಮಹಡಿಯಲ್ಲಿದ್ದರು.
WD
ಅಷ್ಟರಲ್ಲಿ ಭಾರೀ ಗಾತ್ರದ ಅಲೆಯೊಂದು ದ್ವೀಪಕ್ಕೆ ಬಂದಪ್ಪಳಿಸಿತು. ನೋಡನೋಡುತ್ತಿದ್ದಂತೆ ನೆರೆ ಬಂತು. ಹೋಟೇಲ್‌ನ ಇಡೀ ಕಟ್ಟಡ ಕ್ಷಣ ಕಾಲ ಅದುರಿತು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಪ್ರಾಣಭಯ ಆವರಿಸಿತ್ತು. ಚಿತ್ರತಂಡವೂ ಇದೇ ಹೋಟೆಲ್‌ಗೆ ಬರುವ ಹಾದಿಯಲ್ಲಿತ್ತು. ಅವರಿಗೆ ಫೋನ್ ಮಾಡೋಣವೆಂದರೆ ಮೊಬೈಲ್ ಸಿಗ್ನಲ್ ಹೊರಟು ಹೋಗಿತ್ತು. ಏನು ಮಾಡಬೇಕೆಂದು ಕ್ಷಣಕಾಲ ಅರಿವಾಗಲೇ ಇಲ್ಲ. ನಮ್ಮ ಪ್ರಾಣ ಹೋಯಿತೆಂದೇ ಅಂದುಕೊಂಡಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲಿ ಎಲ್ಲ ಸರಿಯಾಯಿತು. ಇದಾಗಿ ಅರ್ಧ ಗಂಟೆಯಲ್ಲಿ ತಲುಪಬೇಕಾಗಿದ್ದ ಚಿತ್ರತಂಡ ಎರಡು ಗಂಟೆಗಳ ನಂತರ ಹೋಟೆಲಿಗೆ ಸುರಕ್ಷಿತವಾಗಿ ಬಂತು. ಸುನಾಮಿಯ ಪರಿಣಾಮದಿಂದ ಅವರಿಗೆ ತಡವಾಗಿತ್ತು. ಒಟ್ಟಾರೆ ಯಾರಿಗೂ ಏನೂ ಆಗಲಿಲ್ಲ. ಆ ಭಗವಂತನೇ ನಮ್ಮನ್ನು ಕಾಪಾಡಿದ. ಸತ್ತು ಬದುಕಿ ಬಂದ ಹಾಗೆ ಅನುಭವವಾಯಿತು. ಬದುಕಿದ್ದೇ ಅದೃಷ್ಟ ಎಂದರು ಖುಷ್ಬೂ. ಹೀಗೆ ಹೇಳುವಾಗ ಅವರ ಮಾತಿನಲ್ಲಿ, ಕಣ್ಣಿನಲ್ಲಿ ಇನ್ನೂ ಭಯವಿತ್ತು.