ಕನ್ನಡದ ಹುಡುಗರೇ ಸೇರಿಕೊಂಡು ನಿರ್ಮಿಸಿರುವ ಆಲ್ಬಂ ಎಂಬ ಹೆಗ್ಗಳಿಕೆಯೊಂದಿಗೆ ಹೊರಬರುತ್ತಿರುವ ಸನಿಹ ಆಲ್ಬಂ ಸದ್ಯದಲ್ಲಿಯೇ ಮಾರುಕಟ್ಟೆಗೆ ಅಪ್ಪಳಿಸಲಿದೆ.
ಹೌದು. ಕನ್ನಡದಲ್ಲಿ ವಿಡಿಯೋ ಆಲ್ಬಂ ಎಂಬ ಪರಿಕಲ್ಪನೆಗೆ ಅಷ್ಟಾಗಿ ಇನ್ನೂ ಪ್ರೋತ್ಸಾಹ ಸಿಕ್ಕಿಲ್ಲ. ಯಾವುದಾದರೊಂದು ಚಿತ್ರದ ಅಥವಾ ಭಕ್ತಿಗೀತೆ-ಭಾವಗೀತೆಯ ಕ್ಯಾಸೆಟ್ ಕೊಳ್ಳುವಷ್ಟಕ್ಕೇ ಇಲ್ಲಿನ ಜನರ ಆಸಕ್ತಿ ಸೀಮಿತವಾಗಿತ್ತು. ಆ ಪರಂಪರೆಯನ್ನು ಸನಿಹ ಆಲ್ಬಂ ಮುರಿಯಲಿದೆ ಎಂಬುದು ಇದಕ್ಕೆ ದುಡಿದಿರುವವರ ವಿಶ್ವಾಸ.
ಏನೇ ಇರಲಿ, ಒಟ್ಟಾರೆ, ಜೇಬಲ್ಲಿ ಕಾಸಿಲ್ಲದ ಒಂದಷ್ಟು ಹುಡುಗರು ತಮ್ಮ ಕನಸುಗಳನ್ನೇ ಬಂಡವಾಳವಾಗಿಸಿ, ಹಾಡಾಗಿಸಿ ಕಟ್ಟಿರುವ ಆಲ್ಬಂ ಇದಂತೆ. ಒಟ್ಟು ಒಂಭತ್ತು ಹಾಡುಗಳಿರುವ ಈ ಆಲ್ಬಂನಲ್ಲಿ ದೇಸೀ ಪ್ರತಿಭೆಗಳದ್ದೇ ಕಲರವ. ಹೊಚ್ಚ ಹೊಸ ತಾಣಗಳಲ್ಲಿ ಚಿತ್ರಿತವಾಗಿರುವ ಈ ಹಾಡುಗಳಿಗೆ ಸಂಗೀತ ನಿರ್ದೇಶಕ ನೀಲ್ ತಾಜಾ ಆಗಿರುವ ಟ್ಯೂನ್ ನೀಡಿದ್ದಾರೆ ಎಂಬುದು ಗಮನಾರ್ಹ.
ದೊಡ್ಡರಂಗೇ ಗೌಡರಂತಹ ಹಿರಿಯರೂ ಸೇರಿದಂತೆ ಹಲವು ಚಿಗುರು ಪ್ರತಿಭೆಗಳು ಇಲ್ಲಿನ ಹಾಡುಗಳನ್ನು ಬರೆದಿದ್ದು, ಒಂದು ಹಾಡಿಗೆ ನಿರ್ದೇಶಕ ರವಿ ಗರಣಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರಂತೆ. ಉಳಿದ ಹಾಡುಗಳ ನಿರ್ದೇಶನದ ಜವಾಬ್ದಾರಿ ಹೊಸ ಹುಡುಗರದ್ದೇ ಎಂಬುದು ಹೆಮ್ಮೆಯ ಸಂಗತಿ.