ಎಸ್.ನಾರಾಯಣ್‌ರವರ ಮೂಸೆಯಿಂದ ರೂಪುಗೊಂಡ ಮತ್ತೋರ್ವ ನಾಯಕಿ ನಟಿ ರೂಪಿಕಾ ಬಂದ ಕೆಲವೇ ದಿನಗಳಲ್ಲಿ ಚಿತ್ರೋದ್ಯಮದ ಗಮನವನ್ನು ಸೆಳೆಯುತ್ತಿದ್ದಾಳೆ. ಈ ಹುಡುಗಿ ನಾರಾಯಣ್ ನಿರ್ದೇಶನದ ಚೆಲುವಿನ ಚಿಲಿಪಿಲಿಯಲ್ಲಿ ಅಭಿನಯಿಸಿರುವ ಪ್ರತಿಭಾವಂತೆ ಎನ್ನುವುದಿಲ್ಲಿ ಗಮನಾರ್ಹ.
ಇದಕ್ಕೂ ಮುಂಚೆ ಚೆಲುವಿನ ಚಿತ್ತಾರದ ಮೂಲಕ ಅಮೂಲ್ಯಾಳನ್ನು ನಾಯಕಿಯಾಗಿ ಪರಿಚಯಿಸಿದಾಗ ಉದ್ಯಮದ ಹಲವರ ಹುಬ್ಬೇರಿತ್ತು ಹಾಗೂ ಆಕೆ ಅಪ್ರಾಪ್ತ ವಯಸ್ಸಿನವಳು ಎಂಬ ಕಾರಣಕ್ಕೆ ಒಂದಷ್ಟು ವಿವಾದವೂ ಎಬ್ಬಿದ್ದವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈಗ ರೂಪಿಕಾ ವಿಷಯಕ್ಕೆ ಬರೋಣ. ಈ ಚಿತ್ರಕ್ಕೂ ಮುಂಚೆ ಕೆಲವೊಂದು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದರೂ ಸಹ, ಚೆಲುವಿನ ಚಿಲಿಪಿಲಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವುದರಿಂದ ಅದು ಎಲ್ಲರ ಗಮನ ಸೆಳೆದಿದೆ. ಅಷ್ಟೇ ಅಲ್ಲ, ಎಲ್ಲರಿಂದ ಆಕೆಯ ಪಾತ್ರಕ್ಕೆ ಮೆಚ್ಚುಗೆಯೂ ಕೇಳಿ ಬಂದಿದೆ. ರೂಪದಲ್ಲಿ ತನ್ನ ಹೆಸರಿನಂತೆಯೇ ಗೊಂಬೆಯಂತೆ ತೆರೆಯಲ್ಲಿ ಕಂಡರೆ, ಅಭಿನಯದಲ್ಲೂ ಕಡಿಮೆಯಿಲ್ಲ ಎಂದು ಆಕೆ ತನ್ ಮೊದಲ ಚಿತ್ರದಲ್ಲೇ ಸಾಬೀತು ಪಡಿಸಿದ್ದಾಳೆ ಎಂಬ ಮಾತುಗಳೂ ಕೇಳಿ ಬಂದಿವೆ. ಹೀಗಾಗಿ ಅವಕಾಶಗಳ ಮೇಲೆ ಅವಕಾಶಗಳು ಬರುತ್ತಿದ್ದರೂ ಸಹ ಕೇವಲ ಸುಸಂಸ್ಕ್ಕತ ಪಾತ್ರಕ್ಕಷ್ಟೇ ತಾನು ಮೀಸಲು ಎಂದು ಈ ಪುಟ್ಟ ಹುಡುಗಿ ನಿಯಮ ಹೇರಿಕೊಂಡಿದ್ದಾರಂತೆ. ಹಾಗಾಗಿ ಪಾತ್ರಗಳ ಮಟ್ಟಿಗೆ ಈಕೆ ಸದ್ಯಕ್ಕೆ ಚ್ಯೂಸಿ.
ಬೆಂಗಳೂರಿನ ಚಾಮರಾಜಪೇಟೆಯ ಸಾಮಾನ್ಯ ಕುಟುಂಬವೊಂದಕ್ಕೆ ಸೇರಿದ ರೂಪಿಕಾ ಇನ್ನೂ ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆಯುವುದಿದೆ ಎಂಬುದೇ ಸೋಜಿಗದ ಸಂಗತಿ.