ಸದ್ಯಕ್ಕೆ ದೂದ್ ಪೇಡ ಖ್ಯಾತಿಯ ದಿಗಂತ್ ಫುಲ್ ಖುಷ್. ಅದಕ್ಕಿರುವ ಎಕೈಕ ಕಾರಣ ಅವರ ಮನಸಾರೆ, ಮನಸಾರೆ, ಮನಸಾರೆ ಅಷ್ಟೇ.
ಹೌದು. ದಿಗಂತ್ ಫುಲ್ ಥ್ರಿಲ್ಲಾಗಿ ಹೋಗಿದ್ದಾರಂತೆ. ಇತ್ತೀಚಿನ ಅವರ ಮನಸಾರೆ ಚಿತ್ರಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆವೇ ಅವರ ಈ ಖುಷಿಗೆ ಕಾರಣ. ಸಿನಿಮಾಕ್ಕೆ ದಕ್ಕಿದ ಪ್ರತಿಕ್ರಿಯೆ ನಿಜಕ್ಕೂ ನನ್ನ ನಿರೀಕ್ಷೆಗೂ ಮೀರಿತ್ತು. ಇಷ್ಟೊಂದು ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಬರುತ್ತೆ ಅಂತ ದೇವರಾಣೆಗೂ ಊಹಿಸಿರಲಿಲ್ಲ. ಮುಖ್ಯವಾಗಿ ನನ್ನ ಪಾತ್ರಕ್ಕೆ ಮಾಧ್ಯಮಗಳೂ ಸೇರಿದಂತೆ ಬಹುತೇಕರು ನೀಡಿದ ಪ್ರತಿಕ್ರಿಯೆ ಸಕಾರಾತ್ಮಕವಾಗಿಯೇ ಇತ್ತು. ಇದರಿಂದ ತುಂಬ ಖುಷಿಯಾಗಿದೆ ಎನ್ನುತ್ತಾರೆ ದಿಗಂತ್.
ಸಿನಿಮಾ ನೋಡಿ ಎಷ್ಟೋ ಮಂದಿ, ಫೋನ್ ಕಾಲ್, ಮೆಸೇಜ್‌ಗಳ ಮೂಲಕ ಅಭಿನಯಿಸುತ್ತಲೇ ಇದ್ದಾರಂತೆ. ಇದರಿಂದ ದಿಗಂತ್ ಅವರ ಮೊಬೈಲ್ ಜಾಮ್ ಆಗಿ ಕುಲಗೆಟ್ಟು ಹೋಗಿದೆಯಂತೆ. ಹಾಗಾಗಿ ಸದ್ಯಕ್ಕೆ ಸ್ವಿಚ್ ಆಫೇ ಗತಿ ಎಂದು ಫೋನ್ ಆಫ್ ಮಾಡಿ ಕೂತಿದ್ದಾರೆ ದಿಗಂತ್.
ಎಷ್ಟೋ ಫೋನ್ ಕಾಲ್‌ಗಳು, ಮೆಸೇಜ್‌ಗಳು ಹರಿದುಬಂದವು. ಇದರಿಂದ ನನ್ನ ಫೋನ್ ಜಾನ್ ಆಗಿದೆ. ಹಾಗಾಗಿ ಸಿನಿಮಾ ಬಿಡುಗಡೆಯ ನಂತರ 2 ದಿನಗಳ ಕಾಲ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಕೂರಬೇಕಾಯಿತು. ನಾನು ಆಗ ಸ್ವಯಂವರ ಚಿತ್ರದ ಶೂಟಿಂಗ್‌ನಲ್ಲಿದ್ದೆ. ನನ್ನ ಅಭಿನಯಕ್ಕೆ ಇಷ್ಟು ಉತ್ತಮ ಪ್ರತಿಕ್ರಿಯೆ ಕಂಡು ನನಗೆ ತುಂಬ ಖುಷಿಯಾಗಿದೆ ನಾನು ನನ್ನ ಮನಸಾರೆಯ ದಿನಗಳನ್ನು ಮನಸಾರೆ ಅನುಭವಿಸುತ್ತಿದ್ದೇನೆ ಎಂದರು ದಿಗಂತ್.
PR
ಯುವ ಜನಾಂಗ ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೊಟ್ಟಷ್ಟೇ ವಯಸ್ಸಾದವರೂ ಇದಕ್ಕೆ ಸ್ಪಂದಿಸಿದ್ದು ದಿಗಂತ್‌ಗೆ ಆಶ್ಚರ್ಯ ತಂದಿದೆ. ಹೌದು. ಸಣ್ಣವರಿಂದ ಹಿಡಿದು ಮುದುಕರವರೆಗೂ ಎಲ್ಲರೂ ನನ್ನ ಪಾತ್ರ ಇಷ್ಟಪಟ್ಟಿದ್ದಾರೆ. ಹಾಡಿನ ದೃಶ್ಯದಲ್ಲಿ ನನ್ನನ್ನು ಬಹುವಾಗಿ ಮೆಚ್ಚಿದ್ದಾರೆ. ಇದ್ಕಕಿಂತ ಖುಷಿ ಇನ್ನೇನಿದೆ ಎಂದು ಗುಳಿ ಕೆನ್ನೆಯಲ್ಲಿ ಇನ್ನಷ್ಟು ಸಂತೋಷ ತುಂಬಿದ ಗುಳಿ ಬೀಳಿಸಿ ನಗುತ್ತಾರೆ ದಿಗಂತ್.
ನನ್ನ ಬಹುತೇಕ ಅಭಿಮಾನಿಗಳು ಅದರಲ್ಲೂ ಮಹಿಳಾ ಅಭಿಮಾನಿಗಳು ನಾನು ಚಿತ್ರದಲ್ಲಿ ನಾನು ಭುಜ ಹಾರಿಸಿ ತಲೆ ಕುಲುಕುವ ಮ್ಯಾನರಿಸಂನ್ನು ತುಂಬ ಇಷ್ಟಪಟ್ಟಿದ್ದಾರೆ. ಹಾಡಿನ ದೃಶ್ಯದಲ್ಲಿ ಹೀಗೆ ಮಾಡಲು ಹೇಳಿದ್ದು ನನಗೆ ಕೊರಿಯೋಗ್ರಾಫರ್ ಹರ್ಷ. ನನ್ನ ಈ ವಿಶೇಷ ಆಂಗಿಕ ಅಭಿನಯದ ಯಶಸ್ಸು ಹರ್ಷರಿಗೆ ಸಲ್ಲಬೇಕು ಎಂದರು.
ಬಹಳಷ್ಟು ಮಂದಿ ದಿಗಂತ್ ಅವರಿಗೆ ಫೋನ್ ಮಾಡಿ ನೀವ ಹಾಗೆ ಭುಜ ಹಾರಿಸಿ ತಲೆ ಕುಲುಕುವ ಅಭಿನಯ ನಮಗೆ ಬಾಲಿವುಡ್ ನಟ ಶಶಿ ಕಪೂರ್ ಅವರನ್ನು ನೆನಪಿಸಿತು ಎಂದಿದ್ದಾರೆ. ಇದು ನನಗೆ ತುಂಬ ಹರ್ಷ ತಂದಿದೆ ಎಂದರು ದಿಗಂತ್.
MOKSHA
ಆದರೂ ದಿಗಂತ್ ಎಂಬ ದೂದ್‌ಪೇಡಕ್ಕೂ ವಿವಾದಕ್ಕೂ ಬಹು ಹತ್ತಿರದ ನಂಟಿದೆಯಲ್ವಾ ಎಂದರೆ ದಿಗಂತ್ ಗಂಭೀರರಾಗುತ್ತಾರೆ. ನಾನು ಇಂಥದಕ್ಕೆಲ್ಲಾ ಪ್ರತಿಕ್ರಿಯಿಸಿ ಸುಮ್ಮನೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗೋದಿಲ್ಲ. ಎಲ್ಲ ಆರೋಪಕ್ಕೂ ಈವರೆಗೆ ಮೌನ ತಾಳಿದ್ದೇನೆ. ಆದರಿನ್ನು ಮೌನ ಮುರಿಯಬೇಕೆಂದು ನಿರ್ಧರಿಸಿದ್ದೇನೆ. ನಿರ್ದೇಶನ, ನಟ ಹೇಮಂತ್ ಹೆಗ್ಡೆಯವರ ಹೌಸ್‌ಪುಲ್ ಚಿತ್ರದ 50 ದಿನಗಳ ಸಂಭ್ರಮಾಚರಣೆಯಲ್ಲಿ ನಾನು ಭಾಗವಹಿಸಿಲ್ಲ ಅಂತ ಅವರು ನನ್ನನ್ನು ಬೇಜವಾಬ್ದಾರಿಯುತ ನಟ ಎಂದು ಹೀಗಳೆದಿದ್ದಾರೆ. ಆದರೆ ನಾನು ಅವರಿಗೆ ಮೊದಲೇ ನನಗೆ ಯಾಕೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ವಿವರಿಸಿದ್ದೆ. ನನಗೆ ಆ ದಿನ ತಿಪಟೂರಿನಲ್ಲಿ ನಡೆಯುವ ಸ್ವಯಂವರ ಚಿತ್ರದ ಶೂಟಿಂಗ್‌ಗೆ ಹೋಗಲೇ ಬೇಕಾಗಿತ್ತು. ಅದಕ್ಕಾಗಿ ಬರಲು ಸಧ್ಯವಾಗುತ್ತಿಲ್ಲ ಎಂದು ಅವರಿಗೆ ಪರಿಸ್ಥಿತಿ ಅರ್ಥ ಮಾಡಿಸಿದ್ದೆ. ಆಗ ಅವರು ಹೂಂಗುಟ್ಟಿದ್ದರು. ಆದರೆ ಅರ್ಥ ಮಾಡಿಕೊಂಡ ನಂತರವೂ ಸಮಾರಂಭದಲ್ಲಿ ಹೀಗೆ ದೂರುತ್ತಾರೆಂದು ಅಂದುಕೊಂಡಿರಲಿಲ್ಲ. ಆದರೂ, ಹೆಗ್ಡೆ ಸಂಭಾವನೆಯೂ ಸೇರಿ ನನಗೆ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದಾರೆ ಎಂದರು ದಿಗಂತ್.
ಹಾಗಾದರೆ ಇ-ಪ್ರೀತಿಯ ವಿವಾದ ಎಲ್ಲೀವರೆಗೆ ಬಂತು ಎಂದರೆ, ದಿಗಂತ್, ಇ-ಪ್ರೀತಿ ನಿರ್ದೇಶಕಿ ಪ್ರಿಯ ಭಾರತಿ ನನ್ನಲ್ಲಿ ಖುದ್ದು ಕ್ಷಮೆ ಕೇಳುವವರೆಗೂ ನಾನು ಅವರ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.