ಇದು ರೀಲ್ ಕಥೆ ಅಲ್ಲ. ರೀಲ್ ಕಥೆ ನಡೆಸುವವರದ್ದೇ ರಿಯಲ್ ಕಥೆ. ಸಿನಿಮೀಯ ಮಾದರಿಯ ಸತ್ಯ ಘಟನೆ ಇದು.
ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಂಟಾದ ಆರ್ಥಿಕ ವೈಮನಸ್ಸಿನ ಹಿನ್ನೆಲೆಯಲ್ಲಿ 'ಓಂ ನಮಃ' ಚಿತ್ರದ ನಿರ್ಮಾಪಕರನ್ನು ಅಪಹರಿಸಿ ಬ್ಲೇಡ್‌ನಿಂದ ಗಾಯಗೊಳಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಟ್ಟೂರು ಬಡಾವಣೆ ನಿವಾಸಿ ನಿರ್ಮಾಪಕ ರಾಜು ಎಂಬವರು ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓಂ ನಮಃ ಚಿತ್ರವನ್ನು ರಾಜು, ಮುನಿವೀರಯ್ಯ, ಶಾಂತಕುಮಾರ್ ಹಾಗೂ ಉಮೇಶ್ ನಿರ್ಮಿಸುತ್ತಿದ್ದು ಹಣಕಾಸಿನ ವಿಚಾರಕ್ಕೆ ಇವರೆಲ್ಲರ ನಡುವೆ ಜಗಳ ನಡೆದಿತ್ತು. ರಾಜು ಅವರು 10 ಲಕ್ಷ ರೂಪಾಯಿಗಳನ್ನು ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಆದರೆ ಚಿತ್ರದ ಬ್ಯಾನರ್‌ನಲ್ಲಿ ತನ್ನ ಹೆಸರನ್ನು ಕೈಬಿಡಲಾಗಿದೆ ಎಂದು ಅವರು ಹಣ ವಾಪಸು ನೀಡುವಂತೆ ಉಳಿದ ಮೂವರು ಸಹ ನಿರ್ಮಾಪಕರ ಬಳಿ ಕೇಳಿಕೊಂಡಿದ್ದಾರೆ. ಹಣ ಪಾವತಿ ಮಾಡುವುದಕ್ಕಾಗಿ ರಾಜು ಅವರಿಗೆ ಮುನಿವೀರಯ್ಯ ಚೆಕ್ ನೀಡಿದ್ದರೂ, ಅದು ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜು ಉಳಿದ ನಿರ್ಮಾಪಕರ ಜತೆಗೆ ಜಗಳವಾಡಿದ್ದರಿಂದ ಸೇಡಿನ ಕಾರಣ ರಾಜು ಅವರ ಮೇಲೆ ಹಲ್ಲೆ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಶಾರದಾ ನಗರದಲ್ಲಿರುವ ರಾಜು ಅವರ ಮೆಕ್ಯಾನಿಕ್ ಶಾಪ್ ಬಳಿ ನಾಲ್ಕು ಮಂದಿ ಬಂದು ಕಾರಿನಲ್ಲಿ ಅಪಹರಿಸಿ, ದೊಡ್ಡ ಬಳ್ಳಾಪುರ ಮಾರ್ಗ ಮಧ್ಯೆ ಬ್ಲೇಡ್‌ನಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದಾರೆ. ತನ್ನನ್ನು ಉಳಿದ ಸಹ ನಿರ್ಮಾಪಕರೇ ಅಪಹರಿಸಿ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾರೆ ರಾಜು ಅವರು ಯಲಹಂಕ ಉಪ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗಷ್ಟೇ ಒಂ ನಮಃ ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಗಿತ್ತು. ಅರ್ಜುನ್ ಸಂಗೀತ ಸಂಯೋಜನೆಯ ಈ ಚಿತ್ರವನ್ನು ವಿಜಯೇಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಘಟನೆಯ ಮೂಲಕ ಮತ್ತೊಂದು ಕನ್ನಡ ಚಿತ್ರವೀಗ ವಿವಾದದ ಹಾದಿಯಲ್ಲಿದೆ.