ವೇಶ್ಯಾವಾಟಿಕೆ: ಒಗ್ಗಟ್ಟಾದ ತಮಿಳು ಚಿತ್ರರಂಗ, ಸಂಪಾದಕ ಬಂಧನ!
ಚೆನ್ನೈ, ಗುರುವಾರ, 8 ಅಕ್ಟೋಬರ್ 2009( 14:21 IST )
WD
ವೇಶ್ಯಾವಾಟಿಕೆ ಹಿನ್ನೆಲೆಯಲ್ಲಿ ಬಂಧಿತರಾದ ನಟಿ ಭುವನೇಶ್ವರಿ ಪೊಲೀಸರಿಗೆ ಹೇಳಿದ್ದರೆನ್ನಲಾದ ಇತರ ನಟಿಯರ ಹೆಸರನ್ನು ಪತ್ರಿಕೆಯಲ್ಲಿ ಹೆಸರು ಹಾಗೂ ಫೋಟೋಗಳ ಸಹಿತ ಪ್ರಕಟ ಮಾಡಿರುವ ಆರೋಪದಡಿ ತಮಿಳಿನ ದಿನಮಲರ್ ಪತ್ರಿಕೆಯ ಸಂಪಾದಕ ಬಿ.ಲೆನಿನ್ ಅವರನ್ನು ಕೇಂದ್ರ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಭಾರತೀಯ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ರಾಧಾ ರವಿ ಅವರು ಪೊಲೀಸರಿಗೆ ದಿನಮಲರ್ ಪತ್ರಿಕೆ ಆಧಾರ ರಹಿತವಾಗಿ ಇತರ ನಟಿಯರ ಫೋಟೋ ಸಹಿತ ವರದಿಯನ್ನು ಪ್ರಕಟಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಅವರು ನೀಡಿರುವ ದೂರು ತಮಿಳುನಾಡು ಮಹಿಳಾ ದೌರ್ಜನ್ಯಾ ಕಾಯಿದೆಯಡಿ ದಾಖಲಾಗಿದೆ.
ಒಗ್ಗಟ್ಟಾದ ತಮಿಳು ಚಿತ್ರರಂಗ: ಬಂಧನಕ್ಕೂ ಮುನ್ನ ಬುಧವಾರವೇ ವರದಿಯನ್ನು ಅತ್ಯುಗ್ರವಾಗಿ ಖಂಡಿಸಿದ ದಕ್ಷಿಣ ಭಾರತೀಯ ಚಲನಚಿತ್ರ ಕಲಾವಿದರ ಸಂಘ ಹಾಗೂ ಇಡೀ ತಮಿಳು ಚಿತ್ರರಂಗ ಇದಕ್ಕೆ ಅಭೂತಪೂರ್ವ ರೀತಿಯಲ್ಲಿ ಸ್ಪಂದಿಸಿದೆ. ಸೂಪರ್ ಸ್ಟಾರ್ ರಜನೀಕಾಂತ್ ಸೇರಿದಂತೆ ಎಲ್ಲ ನಟ, ನಟಿಯರು ಒಗ್ಗಟ್ಟಾಗಿ ತಮಿಳು ಪತ್ರಿಕೆ ದಿನಮಲರ್ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ನಂತರ ಒಮ್ಮತವಾಗಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ದಿನಮಲರ್ ಪತ್ರಿಕೆಯ ಸಂಪಾದಕರ ವಿರುದ್ಧ ಸಂಘ ದೂರು ದಾಖಲಿಸಿತ್ತು.
WD
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಧಾ ರವಿ, ಅಧ್ಯಕ್ಷ ಶರತ್ ಕುಮಾರ್, ಸೂಪರ್ ಸ್ಟಾರ್ ರಜನೀಕಾಂತ್, ವಿಜಯಕಾಂತ್, ಸೂರ್ಯ, ವಿಜಯಕುಮಾರ್, ರಾಧಿಕಾ, ಶ್ರೀಪ್ರಿಯಾ, ಊರ್ವಶಿ ಹಾಗೂ ಇತರರು ಪಾಲ್ಗೊಂಡಿದ್ದರು.
ಭಾವುಕತೆಗೆ ಸ್ಪಂದಿಸಿ- ರಜನಿ ಮನವಿ: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಜನೀಕಾಂತ್, ಪತ್ರಿಕೆಗಳು ತಮ್ಮ ವರದಿಗಳನ್ನು ಪ್ರಕಟಿಸುವ ಮೊದಲು ಜನರ ಭಾವುಕತೆಯನ್ನು ಅರಿತುಕೊಳ್ಳುವುದು ಉತ್ತಮ ಎಂದರು. ವಿಜಯಕಾಂತ್ ಮಾತನಾಡಿ, ಪತ್ರಿಕಾ ಸ್ವಾತಂತ್ರ್ಯ ಯಾವತ್ತೂ ದುರ್ಬಳಕೆಯಾಗಬಾರದು. ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಮಾಧ್ಯಮಗಳು ಜನರ ಸೆಂಟಿಮೆಂಟನ್ನು ಘಾಸಿಗೊಳಿಸುವ ಕೆಲಸ ಮಾಡಬಾರದು ಎಂದರು.
WD
ನಾಯಕ ನಟ ಸೂರ್ಯ ಮಾತನಾಡಿ, ದಕ್ಷಿಣ ಭಾರತದ ಸಿನಿಮಾ ನೌಕರರ ಒಕ್ಕೂಟ ಒಂದು ಕಾನೂನು ಘಟಕವನ್ನು ಹೊಂದಿ ಇಂತಹ ವರದಿಗಳಾಗುವ ಸಂದರ್ಭಗಳಲ್ಲಿ ಅದರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು. ನಟಿಯರಾದ ರೇವತಿ, ಸೀತಾ, ರೋಹಿಣಿ, ನಳಿನಿ ಹಾಗೂ ಇತತರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಭುವನೇಶ್ವರಿ ಅವರ ವೇಶ್ಯಾವಾಟಿಕೆ ಪ್ರಕರಣದ ಹಿನ್ನೆಲೆಯಲ್ಲಿ ದಿನಮಲರ್ ಪತ್ರಿಕೆ, ಭುವನೇಶ್ವರಿ ಅವರು ಖ್ಯಾತ ನಟಿಯರ ದೊಡ್ಡ ವೇಶ್ಯಾವಾಟಿಕೆ ಜಾಲವನ್ನೇ ಹೊಂದಿದ್ದರು ಎಂದು ವರದಿ ಮಾಡಿತ್ತು. ಅಲ್ಲದೆ, ಈ ಜಾಲದಲ್ಲಿ ತಮಿಳು ಚಿತ್ರರಂಗದ ಇತರ ಹಲವು ಖ್ಯಾತ ನಟಿಯರು ಶಾಮೀಲಾಗಿದ್ದಾರೆ ಎಂದು ಅವರ ಹೆಸರು ಹಾಗೂ ಫೋಟೋ ಸಹಿತ ವರದಿ ಪ್ರಕಟವಾಗಿತ್ತು.
ಬಂಧನವನ್ನು ಖಂಡಿಸಿದ ಪತ್ರಕರ್ತ ಸಮೂಹ: ಸಂಪಾದಕ ಲೆನಿನ್ ಅವರನ್ನು ಚೆನ್ನೈನ ಎಗ್ಮೋರ್ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಲೆನಿನ್ ಅವರ ಬಂಧನವನ್ನು ಚೆನ್ನೈ ಪ್ರೆಸ್‌ಕ್ಲಬ್ ಹಾಗೂ ಮದ್ರಾಸ್ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಖಂಡಿಸಿದ್ದು, ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಲೆನಿನ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.