ಒಂದು ಚಿತ್ರದ ಯಶಸ್ಸು, ಅದನ್ನು ಅನುಸರಿಸಿ ಬರುವ ಇತರ ಚಿತ್ರಗಳ ಯಶಸ್ಸು ಎಂಬುದು ಏನೆಲ್ಲಾ ಬದಲಾವಣೆಗಳಿಗೆ ಕಾರಣವಾಗಿಬಿಡುತ್ತದೆ ಅನ್ನೋದಕ್ಕೆ ತಾಜಾ ನಿದರ್ಶನ ಲೂಸ್ ಮಾದ ಖ್ಯಾತಿಯ ಯೋಗೀಶ್. ದುನಿಯಾ ಚಿತ್ರದಲ್ಲಿ ಯೋಗೀಶ್ ಎಂಬ ಹುಡುಗ ಲೂಸ್ ಮಾದ ಎಂಬ ಪುಟ್ಟ ಪಾತ್ರದಲ್ಲಿ ನಟಿಸಿದ್ದೇ ಬಂತು. ಚಿತ್ರವು ಸೂಪರ್ ಹಿಟ್ ಆಗಿ, ಹೂವಿನೊಂದಿಗೆ ನಾರೂ ಸ್ವರ್ಗವನ್ನು ಸೇರುವಂತೆ ಯೋಗೀಶ್ ಕೂಡಾ ಬೆಳಕಿಗೆ ಬಂದರು.
ನಂತರ ಬಂದ, ನಂದ ಲವ್ಸ್ ನಂದಿತಾ, ಅಂಬಾರಿ ಚಿತ್ರಗಳೂ ಸಹ ಯೋಗೀಶ್ಗೆ ಚಿತ್ರರಂಗದಲ್ಲಿ ಒಳ್ಳೆಯ ಬುನಾದಿಯನ್ನೇ ನೀಡಿದವು ಎನ್ನಬೇಕು. ಅವೆಲ್ಲದರ ಪರಿಣಾಮವಾಗಿ ಯೋಗೀಶ್ ಒಂದರ ಹಿಂದೆ ಒಂದರಂತೆ ಚಿತ್ರಗಳಿಗೆ ಸಹಿ ಹಾಕುತ್ತಲೇ ಹೋಗುತ್ತಿದ್ದಾರೆ.
ಈಗಿನದು ದೇವದಾಸ್ ಸರದಿ. ವಾಸ್ತವವಾಗಿ ಈ ಹೆಸರಿನ ಚಿತ್ರವೊಂದರಲ್ಲಿ ನಟ-ನಿರ್ದೇಶಕ ಉಪೇಂದ್ರ ಕಾಣಿಸಿಕೊಳ್ಳಬೇಕಾಗಿತ್ತು. ಮದಿರೆಯ ಬಾಟಲಿಯನ್ನು ಹಿಡಿದುಕೊಂಡು ದೇವದಾಸ್ ಶೈಲಿಯಲ್ಲಿ ಅಡ್ಡಡ್ಡ ಮಲಗಿರುವ ಉಪ್ಪಿಯ ಪ್ರಚಾರ ಚಿತ್ರಗಳು ಪತ್ರಿಕಾಲಯಗಳನ್ನು ತಲುಪಿದ್ದವು ಕೂಡಾ. ಆದರೆ ಉಪೇಂದ್ರರ ಧರ್ಮಪತ್ನಿ ಪ್ರಿಯಾಂಕರಿಗೆ ಅದೇನನ್ನಿಸಿತೋ ಗೊತ್ತಿಲ್ಲ? ಈ ರೀತಿಯ ಪಾತ್ರದಲ್ಲಿ ನಟಿಸುವುದು ಬೇಡ ಅಂದರು ಅಂತ ಒಂದು ಸುದ್ದಿ. ಒಟ್ಟಿನಲ್ಲಿ ಆ ಪ್ರಾಜೆಕ್ಟ್ ಅಲ್ಲಿಗೇ ನಿಂತಿತು.
ಪ್ರಸ್ತುತ ಯೋಗೀಶ್ ನಟಿಸಲಿರುವ ದೇವದಾಸ್ ಚಿತ್ರ ಬೇರೆಯದೇ ಕಥೆಯನ್ನು ಹೊಂದಿದೆ ಅನ್ನುತ್ತೆ ಚಿತ್ರತಂಡ. ಎಬಿಸಿಡಿ ಶಾಂತಕುಮಾರ್ ಚಿತ್ರಕಥೆ ರಚಿಸಿ, ನಿರ್ಮಿಸಿ, ನಿರ್ದೇಶಿಸಲಿರುವ ಈ ಚಿತ್ರದಲ್ಲಿ ಪ್ಯಾಂಡಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ತಾರಾ, ರಮೇಶ್ಭಟ್, ಅವಿನಾಶ್, ಶರಣ್, ಸಾಧುಕೋಕಿಲಾ ಮೊದಲಾದ ತಾರೆಯರ ದಂಡೇ ಚಿತ್ರದಲ್ಲಿದೆಯಂತೆ.