'ಮಿಲನ'ದ ಜೋಡಿ ಮತ್ತೆ ಪೃಥ್ವಿಯಲ್ಲಿ ಕಾಣಿಸಿಕೊಳ್ಳಲಿದೆ. ಹೌದು. ಪೃಥ್ವಿ ಚಿತ್ರದಲ್ಲಿ ಪುನೀತ್ ಎದುರು ನಾಯಕಿಯಾಗಿ ನಟಿಸಲು ಪಾರ್ವತಿ ಮೆನನ್ ಆಯ್ಕೆಯಾಗಿದ್ದಾರೆ. ಮಿಲನದ ಬಳಿಕ ಇತ್ತೀಚೆಗೆ 'ಮಳೆ ಬರಲಿ, ಮಂಜೂ ಇರಲಿ' ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿ ಎಲ್ಲರ ಮನಸೂರೆಗೊಂಡು ಭೇಷ್ ಎನಿಸಿಕೊಂಡಿದ್ದ ಪಾರ್ವತಿ ಮೆನನ್ ಎರಡನೇ ಬಾರಿಗೆ ಪುನೀತ್ ರಾಜ್ ಕುಮಾರ್ ಜತೆಗೂಡಲಿದ್ದಾರೆ.
ಅಕ್ಟೋಬರ್ 15ರಿಂದು ಪೃಥ್ವಿ ಚಿತ್ರೀಕರಣ ಆರಂಭವಾಗಲಿದ್ದು, ಅ.2ರ ಗಾಂಧಿ ಜಯಂತಿಯಂತೇ ಚಿತ್ರ ಸಂಗೀತ ರೆಕಾರ್ಡಿಂಗ್ ಪೂಜೆಯನ್ನು ಮುಗಿಸಿದೆ. ಈಗಾಗಲೇ ಎರಡು ಹಾಡುಗಳ ಧ್ವನಿಮುದ್ರಣ ಕಾರ್ಯ ಮುಗಿದಿದ್ದು, ಚಿತ್ರಕ್ಕೆ ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಕದ್ರಿ ಗೋಪಾಲನಾಥ್ ಅವರ ಪುತ್ರ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕರಾಗಿದ್ದಾರೆ.
MOKSHA
ಇದಕ್ಕೂ ಮೊದಲು ಪೃಥ್ವಿ ಚಿತ್ರದಲ್ಲಿ ರಮ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಬಹುದೊಡ್ಡ ಪುಕಾರು ಎದ್ದಿತ್ತು. ಆದರೆ ಪಾರ್ವತಿ ಅವರು ಇದಕ್ಕೆ ಆಯ್ಕೆಯಾಗಿರುವುದು ಈಗ ಪಕ್ಕಾಗಿದೆ. ಆರೆ ರಮ್ಯಾ ಇದಕ್ಕೆ ನಾಯಕಿ ಎಂದು ಗಾಸಿಪ್ ಹರಡಿದ ಬಗ್ಗೆ ಅತೀವವಾಗಿ ನೊಂದಿರುವ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು, ''ರಮ್ಯಾ ಅವರನ್ನು ಚಿತ್ರಕ್ಕೆ ತೆಗೆದುಕೊಳ್ಳುವ ಬಗ್ಗೆ ನಾವು ಯೋಚಿಸಿಯೂ ಇರಲಿಲ್ಲ. ಅವರು ಈ ಪಾತ್ರಕ್ಕೆ ಸೂಟ್ ಕೂಡಾ ಆಗಲ್ಲ. ಈ ಪಾತ್ರಕ್ಕೆ ನಾವು ಬೇರೆಯೇ ತೆರನಾದ ನಾಯಕಿಯನ್ನು ಹುಡುಕುತ್ತಿದ್ದೆವು. ರಮ್ಯಾ ನಮ್ಮ ಮನಸ್ಸಿನಲ್ಲಿ ಬಂದಿರಲೇ ಇಲ್ಲ. ಇನ್ನು ಆಯ್ಕೆಯ ಮಾತೆಲ್ಲಿ?'' ಎನ್ನುತ್ತಾರೆ.
ಚಿತ್ರವನ್ನು 'ಸವಾರಿ' ಖ್ಯಾತಿಯ ಜಾಕೋಬ್ ವರ್ಗೀಸ್ ನಿರ್ದೇಶಿಸುತ್ತಿದ್ದಾರೆ. ''ಚಿತ್ರವನ್ನೂ ಯಾವುದೇ ಕನ್ನಡೇತರ ಬಿಗ್ ಬಜೆಟ್ ಚಿತ್ರಕ್ಕೂ ಕಮ್ಮಿಯೇ ಇಲ್ಲದಂತೆ ನಿರ್ಮಿಸುತ್ತೇವೆ'' ಎಂದರು ಸೂರಪ್ಪ ಬಾಬು.