ಆಪ್ತರಕ್ಷಕ ಚಿತ್ರ ಆಪ್ತಮಿತ್ರದ ಮ್ಯಾಜಿಕ್ಕನ್ನು ಮರುಕಳಿಸುತ್ತದೆಯೇ?
PR
ಚಿತ್ರದ ಯಶಸ್ಸಿಗೆ ಯಾವುದೇ ಸಿದ್ಧಸೂತ್ರಗಳಿಲ್ಲ. ಒಂದು ವೇಳೆ ಇದ್ದಿದ್ದರೆ ಎಲ್ಲರೂ ಅದೇ ಸೂತ್ರವನ್ನು ಪಟ್ಟಾಗಿ ಹಿಡಿದುಕೊಂಡು ತಮಗಿಷ್ಟ ಬಂದಷ್ಟು ಚಲನಚಿತ್ರಗಳನ್ನು ನಿರ್ಮಿಸಿಬಿಡುತ್ತಿದ್ದರು ಎಂಬ ಮಾತು ಗಾಂಧೀನಗರದಲ್ಲಿ ಚಾಲ್ತಿಯಲ್ಲಿದೆ.
ಈ ಮಾತು ಈಗ ನೆನಪಿಗೆ ಬರಲು ಕಾರಣ, ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವುದು ಮತ್ತು ಅದು ಆಪ್ತಮಿತ್ರ ಚಿತ್ರದ 2ನೇ ಭಾಗ ಅಥವಾ ಅದೇ ಜಾಡಿನಲ್ಲಿ ಸಾಗುವ ಚಿತ್ರ ಎಂಬ ಸುದ್ದಿಗಳು ಹಬ್ಬಿರುವುದು. ಆಪ್ತಮಿತ್ರ ಚಿತ್ರ ಪಡೆದ ಯಶಸ್ಸು ಹಾಗೂ ಗಳಿಸಿದ ಹಣದ ಪ್ರಮಾಣದ ಕುರಿತು ರಂಜನೀಯ ಕಥೆಗಳು ಇನ್ನೂ ಚಾಲ್ತಿಯಲ್ಲಿರುವಾಗಲೇ ಈ ಚಿತ್ರ ಹೊರಬರುತ್ತಿರುವುದು ಮತ್ತೊಂದು ವಿಶೇಷ ಸಂಗತಿ.
ಈ ಚಿತ್ರದಲ್ಲಿ ವಿಷ್ಣುವರ್ಧನ್, ಅವಿನಾಶ್, ಸಹ-ನಿರ್ಮಾಪಕ ಕೃಷ್ಣಕುಮಾರ್, ನಿರ್ದೇಶಕ ಪಿ.ವಾಸು ಹೊರತು ಪಡಿಸಿದರೆ, ಆಪ್ತಮಿತ್ರ ಚಿತ್ರದ ಉಳಿದ ತಂಡ ಯಾಕೋ ಕಾಣಿಸುತ್ತಿಲ್ಲ. ನಟ-ನಿರ್ಮಾಕಪ ದ್ವಾರಕೀಶ್ ಅವರೂ ಇಲ್ಲ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಕೋಮಲ್ ಸೇರ್ಪಡೆಯಾಗಿದ್ದಾರೆ. ಇನ್ನುಳಿದಂತೆ ಭಾವನಾ, ವಿಮಲಾ, ರಮೇಶ್ಭಟ್, ಶ್ರೀನಿವಾಸ ಮೂರ್ತಿ ಇವರೇ ಮೊದಲಾದ ಕಲಾವಿದರು ಇದ್ದಾರೆ.
ವಾಸ್ತವವಾಗಿ ಆಪ್ತರಕ್ಷಕದ ಕಥೆಯನ್ನು ರಜನಿಕಾಂತ್‌ಗಾಗಿ ಮಾಡಿದ್ದಂತೆ. ಆದರೆ ಆಪ್ತಮಿತ್ರ ಮೊದಲು ಕನ್ನಡದಲ್ಲಿ ಬಂದಿದ್ದರಿಂದ ಈ ಚಿತ್ರವೂ ಮೊದಲು ಕನ್ನಡದಲ್ಲಿಯೇ ಬರಲಿ ಎಂದು ರಜನಿ ಹೇಳಿದರು. ಆದ್ದರಿಂದ ಕನ್ನಡದಲ್ಲಿ ಮೊದಲು ನಿರ್ಮಾಣಗೊಂಡಿದೆ ಎನ್ನುತ್ತದೆ ಚಿತ್ರತಂಡ. ಅತೀಂದ್ರಿಯ ಶಕ್ತಿಗಳ ಇರುವಿಕೆಯ ಹಾಗೂ ಅದರ ಕುರಿತಾದ ನಂಬುಗೆ-ಅಪನಂಬುಗೆಯ ಸುತ್ತ ಚಿತ್ರ ಸುತ್ತುತ್ತದೆ ಎಂಬಷ್ಟೇ ಮಾಹಿತಿ ಸದ್ಯಕ್ಕೆ ಲಭ್ಯ.