ಕನ್ನಡ ನಾಡಿನಲ್ಲಿ ಎಡೆಬಿಡದೆ ಸುರಿದ ಮಳೆಯ ನೆರೆಯಿಂದ ಸಂತ್ರಸ್ಥರಾದ ಜನತೆಯೆಡೆಗೆ ಕನ್ನಡ ಸಿನಿಮಾ ರಂಗವೂ ಕೃಪಾಕಟಾಕ್ಷ ಬೀರಿದೆ. ಅತ್ತ ಮುಖ್ಯಮಂತ್ರಿಯೇ ಧನಸಂಗ್ರಹ ಕಾರ್ಯಾಚರಣೆಗೆ ಸ್ವತಃ ಇಳಿದ ಬೆನ್ನಲ್ಲೇ, ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಕನ್ನಡ ಚಿತ್ರರಂಗ ರಾಜ್ಯದ ಹಲವೆಡೆ ರೋಡ್ ಶೋ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಧನಸಂಗ್ರಹಣೆಯಲ್ಲಿ ತೊಡಗಲಿದೆ.
ಬುಧವಾರ ರಾತ್ರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸಿದ ಸಭೆಯಲ್ಲಿ ಅಧ್ಯಕ್ಷೆ ಜಯಮಾಲಾ ಈ ವಿಷಯ ತಿಳಿಸಿದ್ದಾರೆ. ಡಾ.ವಿಷ್ಣುವರ್ಧನ್, ಅಂಬರೀಷ್, ಬಿ.ಸರೋಜಾ ದೇವಿ, ರವಿಚಂದ್ರನ್, ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್, ರಮ್ಯಾ, ದೊಡ್ಡಣ್ಣ ಹಾಗೂ ಚಿತ್ರರಂಗದ ಇನ್ನೂ ಅನೇಕ ಘಟಾನುಘಟಿಗಳು ಜಯಮಾಲಾ ಅವರ ದನಿಗೆ ಕೈಜೋಡಿಸಿದ್ದಾರೆ.
MOKSHA
ಇದೇ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ 25 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ನಿರ್ಧರಿಸಿದೆ. ಈ ಹಣವನ್ನು ಮಂಡಳಿ ಒಂದು ದಿನ ರಾಜ್ಯದ ಎಲ್ಲ ಚಿತ್ರಮಂದಿರಗಳ ಒಂದು ದಿನದ ಆದಾಯದಿಂದ ಪಡೆಯುವುದಾಗಿ ತಿಳಿಸಿದೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಮಳೆಯ ಹಾವಳಿಯಿಂದ ತತ್ತರಿಸಿಹೋಗಿದೆ. 160ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಗುಲ್ಬರ್ಗಾ, ರಾಯಚೂರು, ಕೊಪ್ಪಳ, ಕಾರವಾರ, ಬಿಜಾಪುರ, ಗದಗ್, ಧಾರವಾಡ ಜಿಲ್ಲೆಗಳು ನೆರೆ ಹಾವಳಿಗೀಡಾದ ಪ್ರಮುಖ ಜಿಲ್ಲೆಗಳು. ಕೇವಲ ಬಿಜಾಪುರವೊಂದರಲ್ಲೇ 30ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.
PTI
ಬಿಜಾಪುರದಲ್ಲಿ ಅನೇಕ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ರಸ್ತೆ ಸಂಚಾರ ಸೇರಿದಂತೆ ಜನಜೀವನವೇ ಅಸ್ತವ್ಯಸ್ತವಾಗಿವೆ. ಇಂತಹ ಸಂದರ್ಭ ಕಲಾವಿದರಾಗಿ ನಾವು ಜನರ ನೋವಿಗೆ ಸ್ಪಂದಿಸುವುದು ಅತ್ಯಂತ ಅಗತ್ಯ. ಅವರಿಗಾಗಿ ನಾವು ಹಣ ಸಂಗ್ರಹ ಮಾಡುವ ಮೂಲಕ ಜನರ ಕಣ್ಣೊರೆಸುವ ಕಾರ್ಯ ಮಾಡುತ್ತೇವೆ ಎಂದರು ಜಯಮಾಲಾ.
ರೋಡ್ ಶೋ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಈಗಾಗಲೇ ಚಿತ್ರರಂಗದ ಅನೇಕರು ಸ್ವಯಂಪ್ರೇರಣೆಯಿಂದ ದಾನ ಮಾಡುತ್ತಿದ್ದಾರೆ. ಹೃದಯದಲಿ ಇದೇನಿದು ಎಂಬ ಚಿತ್ರ ನಿರ್ಮಿಸುತ್ತಿರುವ ನಿರ್ಮಾಪಕಿ ದರ್ಶನ್ ಪ್ರಿಯಾ 51,000 ರೂಪಾಯಿಗಳ ಚೆಕ್ ನೀಡಿದ್ದಾರೆ. ರಾಜ್ ದಿ ಶೋ ಮ್ಯಾನ್ ಚಿತ್ರದ ನಿರ್ಮಾಪಕ ಶ್ರೀನಿವಾಸ ಮೂರ್ತಿ 50 ಸಾವಿರ ರೂಪಾಯಿಗಳ ಚೆಕ್ ನೀಡಿದ್ದಾರೆ.
IFM
ನೀನೇ ನೀನೇ ಚಿತ್ರದ ನಿರ್ಮಾಪಕ ಬಸವಾ ರೆಡ್ಡಿ ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಅಚಳ್ಳಿ ಎಂಬ ಹಳ್ಳಿಯನ್ನ ದತ್ತು ತೆಗೆದುಕೊಂಡಿದ್ದಾರೆ. ನೆರೆಯಿಂದ ಈ ಹಳ್ಳಿ ಸಂಪೂರ್ಣವಾಗಿ ಘಾಸಿಗೊಂಡಿದೆ. ಅಲ್ಲಿನ ಜನರಿನ್ನೂ ನೆರೆಯ ಭಯಾನಕ ಅನುಭವದಿಂದ ಹೊರಬಂದಿಲ್ಲ. ಬಸವಾ ರೆಡ್ಡಿ ಅವರು ಎರಡು ಲಾರಿ ತುಂಬಾ ಧಾನ್ಯ, ಬೇಳೆಕಾಳುಗಳನ್ನು ಹಾಗೂ ಬಟ್ಟೆಬರೆಗಳನ್ನು ಅಚಳ್ಳಿ ಹಳ್ಳಿಯ ಸಂತ್ರಸ್ಥರಿಗೆ ಅಕ್ಟೋಬರ್ 11ರಂದು ಆರ್.ಟಿ.ನಗರದ ಶಿರ್ಡಿ ಸಾಯಿಬಾಬಾ ದೇವಸ್ಥಾನದ ಮೂಲಕ ಕಳುಹಿಸಲಿದ್ದಾರೆ. ಬಸವಾ ರೆಡ್ಡಿ ಅವರು ಚಿತ್ರರಂಗದ ಮಂದಿಗೆ ಅಚಳ್ಳಿ ಜನತೆಗೆ ಸಹಾಯ ಮಾಡಿ ಎಂದು ಕರೆನೀಡಿದ್ದಾರೆ. ಇವರ ಕರೆಗೆ ಓಗೊಟ್ಟ ನಟ ಧ್ಯಾನ್ ಅಚಳ್ಳಿ ಹಳ್ಳಿಗೆಂದೇ ಒಂದು ಲಕ್ಷ ರೂಪಾಯಿಗಳ ಸಹಾಯ ಮಾಡಿದ್ದಾರೆ.