ಪ್ರಾಯಶಃ ಉದಯ ಟಿವಿಗೂ ಕನ್ನಡ ಚಿತ್ರರಂಗಕ್ಕೂ ಬಿಡಿಸಲಾರದ ನಂಟೊಂದಿದೆ ಅನಿಸುತ್ತದೆ. ಕಾಮಿಡಿ ಟೈಂ ಗಣೇಶ್, ಆನಂದ್, ಶಶಾಂಕ್ ಇವರೇ ಮೊದಲಾದ ನಿರೂಪಕರು ನಾಯಕ ನಟರಾಗಿ ಉದ್ಯಮಕ್ಕೆ ಬಂದದ್ದು ಉದಯ ಟಿವಿಯಿಂದಲೇ.
ಈ ಮಾತು ಇಲ್ಲೇಕೆ ಬಂತಪಾ ಅಂದ್ರೆ, ರಾಹುಲ್ ಎಂಬ ಮತ್ತೊಂದು ಪ್ರತಿಭೆ ಅದೇ ಕನಸಿನ ಕಾರ್ಖಾನೆಯಿಂದ ಬಂದಿದೆ. ಈಗಾಗಲೇ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದಲ್ಲಿ ಗಮನ ಸೆಳೆದಿರುವ ರಾಹುಲ್ ಈಗ ಮತ್ತೊಂದು ಚಿತ್ರಕ್ಕೆ ಅಡಿಯಿಟ್ಟಿದ್ದಾರೆ. ಅದೇ 'ಹೃದಯದಲಿ ಇದೇನಿದು'.
ಡಾ.ರಾಜಕುಮಾರ್-ಗೀತಾ ಅಭಿನಯದ ದೇವತಾ ಮನುಷ್ಯ ಚಿತ್ರದ 'ಹೃದಯದಲಿ ಇದೇನಿದೂ, ನದಿಯೊಂದು ಓಡಿದೆ...' ಎಂಬ ಹಾಡನ್ನು ನೀವು ಕೇಳಿರಬಹುದು. ಆ ಚಿತ್ರದ ಸಾಲನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಹೊಂದಿರುವ ಈ ಚಿತ್ರ ಯಾವ ಫಲಿತಾಂಶವನ್ನು ನೀಡಲಿದೆ ಎಂಬುದನ್ನು ಇನ್ನು ಮುಂದಷ್ಟೇ ನೋಡಬೇಕು.
ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಎಂ.ವೆಂಕಟೇಶ ಮೂರ್ತಿಯವರ ಪುತ್ರಿಯಾದ ಪ್ರಿಯಾ ಈ ಚಿತ್ರದ ನಿರ್ಮಾಪಕಿಯಾಗಿ ಗಾಂಧೀನಗರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಿವನ್ ನಿರ್ದೇಶಿಸಿ, ಧರ್ಮಪ್ರಕಾಶ್ ಸಂಗೀತ ನೀಡಿರುವ ಈ ಚಿತ್ರದ ಧ್ವನಿಸುರುಳಿಯನ್ನು ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ, ಖಜಾಂಚಿ ಸಾ.ರಾ.ಗೋವಿಂದು, ಅಕ್ಷಯ್ ಆಡಿಯೋದ ಟಿ.ಪಿ.ಸಿದ್ದರಾಜು, ಸಾಹಿತಿ ಶಿವಶಂಕರ್, ಚಿತ್ರೋದ್ಯಮಿ ಎನ್.ಕುಮಾರ್ ಇವರೇ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಪೂರ್ಣ ಹೊಸಬರೇ ಸೇರಿಕೊಂಡು ಕಟ್ಟಿಕೊಟ್ಟಿರುವ ಈ ಚಿತ್ರತಂಡ ಕಥೆಗೆ ಹೊಂದುವ ನಾಯಕನ ಹುಡುಕಾಟದಲ್ಲಿದ್ದಾಗ ರಾಹುಲ್ ಗೋಚರಿಸಿದರಂತೆ. ಚಿತ್ರದಲ್ಲಿ ನಿರ್ದೇಶಕರ ನಿರೀಕ್ಷೆಗೂ ಮೀರಿ ಅವರು ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.