ಧೂಳ್ ಮಗಾ ಧೂಳ್... ಎಂಬ ಅಪ್ಪಟ ಟಪಾಂಗುಚ್ಚಿ ಹಾಡನ್ನು ದರ್ಶನ್ ಅಭಿನಯದ ಕಲಾಸಿಪಾಳ್ಯ ಚಿತ್ರದಲ್ಲಿ ನೀವು ನೋಡಿದ್ದೀರಿ. ಆ ಹಾಡಿನಂತೆಯೇ ಆ ಚಿತ್ರ ಕೂಡಾ ಸಾಕಷ್ಟು ಧೂಳೆಬ್ಬಿಸಿತು ಎಂಬುದನ್ನು ಮರೆಯುವಂತಿಲ್ಲ. ಆ ಗುಂಗನ್ನು ನೆನಪಿಗೆ ತರುವ ಧೂಳ್ ಎಂಬ ಚಿತ್ರವೀಗ ದ್ವಿತೀಯ ಹಂತದ ಚಿತ್ರೀಕರಣ ಮುಗಿಸಿ ಬಂದಿದೆ. ಐದು ಹಾಡುಗಳ ಚಿತ್ರೀಕರಣ ನವೆಂಬರ್ನಲ್ಲಿ ಆರಂಭವಾಗಲಿದೆ.
ಧೂಳ್ ಚಿತ್ರದಲ್ಲಿ ಲೂಸ್ ಮಾದ ಖ್ಯಾತಿಯ ಯೋಗೀಶ್ಗೆ ಜೊತೆಯಾಗಿದ್ದಾರೆ ಕನ್ನಡ ಚಿತ್ರರಂಗದ ಸದ್ಯದ ಸೆನ್ಸೇಷನ್ ತಾರೆ ಐಂದ್ರಿತಾ ರೇ. ದುನಿಯಾ ವಿಜಿಯೊಂದಿಗೆ ಜಂಗ್ಲಿ ಚಿತ್ರದಲ್ಲಿ, ಪ್ರಜ್ವಲ್ ಜೊತೆ ಮೆರವಣಿಗೆ ಚಿತ್ರದಲ್ಲಿ ಮಿಂಚಿದ ಈ ಬಾಲೆ, ಇತ್ತೀಚೆಗಷ್ಟೇ ಮನಸಾರೆ ಚಿತ್ರ ಬಿಡುಗಡೆಯಾದ ನಂತರವಂತೂ ಹೆಚ್ಚಿನ ಸ್ಟಾರ್ ವ್ಯಾಲ್ಯೂ ಪಡೆದಿದ್ದಾಳೆ ಎಂಬುದು ಗಾಂಧಿನಗರದ ಪಂಡಿತರ ಅಂಬೋಣ.
ಸೇವಾಲಾಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಧೂಳ್ ಚಿತ್ರವನ್ನು ನಂಜುಡಿ ಕಲ್ಯಾಣದಂತಹ ಹಿಟ್ ಚಿತ್ರವನ್ನು ಕೊಟ್ಟ ನಿರ್ದೇಶಕರಾದ ಎಂ.ಎಸ್.ರಾಜಶೇಖರ್ ಅವರ ಮಗ ಧರಣಿ ನಿರ್ದೇಶಿಸುತ್ತಿದ್ದಾರೆ. ಹರಿಕೃಷ್ಣರ ಸಂಗೀತ, ಕೆ.ಎಚ್.ದತ್ತುರವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ರಾಮ್ ನಾರಾಯಣ್ ಸಂಭಾಷಣೆ ಒದಗಿಸಿದ್ದಾರೆ. ರಾಷ್ಟ್ತ್ರಪ್ರಶಸ್ತಿ ವಿಜೇತ ಪ್ರಕಾಶ್ ರೈ ಒಂದು ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಕುತೂಹಲ ಕೆರಳಿಸಿರುವ ವಿಷಯ.
ಏನೇ ಇರಲಿ, ಈ ಧೂಳ್ ನಿಜಕ್ಕೂ ಧೂಳೆಬ್ಬಿಸುತ್ತಾ ಅಂತ ಕಾದು ನೋಡದೆ ವಿಧಿಯಿಲ್ಲ.