ರಾವಣನನ್ನು ಶ್ರೀರಾಮ ತ್ರೇತಾಯುಗದಲ್ಲೇ ಸಂಹರಿಸಿರುವಾಗ ಕ್ಯಾಸೆಟ್ ಬಿಡುಗಡೆ ನೋಡಲು ಅವನೆಲ್ಲಿಂದ ಬಂದಾನಪ್ಪಾ..? ಎಂದು ಗೊಂದಲಪುರದ ನಿವಾಸಿಗಳಾಗಬೇಡಿ. ರಾವಣ ಎಂಬುದು ಚಿತ್ರವೊಂದರ ಹೆಸರು. ಯೋಗಿಪರ್ವ ಇಲ್ಲೂ ಮುಂದುವರೆದಿದೆ. ಅರ್ಥಾತ್...... ಈ ಚಿತ್ರದ ನಾಯಕನೂ ಲೂಸ್ ಮಾದ ಯೋಗೀಶನೇ!
ತಮಿಳಿನ ಸಂಗೀತಮಯ, ಪ್ರೇಮಮಯ ಚಿತ್ರವಾದ 'ಕಾದಲ್ ಕೊಂಡೇನ್' ಕನ್ನಡದಲ್ಲಿ ರಾವಣ ಆಗಿದೆ. ಕಾದಲ್ ಕೊಂಡೇನ್ ಪದಕ್ಕೆ ರಾವಣ ಎಂಬುದು ಪರ್ಯಾಯ ಪದವೇ ಎಂದು ಕೇಳುವಂತಿಲ್ಲ. ಏಕೆಂದರೆ ಇದು ಗಾಂಧೀನಗರ. ಇಲ್ಲಿ ಹೇಳುವುದಕ್ಕೂ ಕೇಳುವುದಕ್ಕೂ ಸಮಯವಿಲ್ಲ..!
ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಗೀತ ನಿರ್ದೇಶಕ ಅಭಿಮಾನ್ ಹಾಡುಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಾಯಕ ನಟ ಯೋಗೀಶರ ತಂದೆಯೇ ಚಿತ್ರದ ಧ್ವನಿಸುರುಳಿಯ ಹಕ್ಕನ್ನೂ ಖರೀದಿಸಿದ್ದಾರಂತೆ.
ಚಿತ್ರವನ್ನು ಯೋಗೀಶ್ ಹುಣಸೂರು ನಿರ್ದೇಶಿಸಿದ್ದು, ಉದಯ್ ಮೆಹ್ತಾ ಹಾಗೂ ಮೋಹನ್ ನಾಯಕ್ ನಿರ್ಮಿಸಿದ್ದಾರೆ. ಹೊಡೆದಾಟದ ಸನ್ನಿವೇಶಗಳನ್ನು ಸ್ಟಂಟ್ ಮಾಸ್ಟರ್ ರವಿವರ್ಮ ವಿಭಿನ್ನವಾಗಿ ಸಂಯೋಜಿಸಿದ್ದು ಅದು ಪಡ್ಡೆಹುಡುಗರಿಗೆ ಮೆಚ್ಚುಗೆಯಾಗಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು. ರಾವಣ ಏನ್ಮಾಡ್ತಾನೋ ನೋಡಬೇಕು.