ಹಾಗೆಂದು ಯಾರಾದರೂ ಕೇಳಿದರೆ ಗಾಬರಿಯಾಗಬೇಡಿ. ಚಿತ್ರರಸಿಕರ ನಿದ್ದೆಗೆಡಿಸಿ ಹುಚ್ಚು ಹಿಡಿಸಿರುವ ಅವರು ಹೇಗೆ ತಾನೇ ಹುಚ್ಚಿಯಾಗಲು ಸಾಧ್ಯ? ಅಂತೀರಾ. ಹೌದು. ಅವರು ಹುಚ್ಚಿಯಾಗಿಲ್ಲ. ತಮ್ಮ ಹುಚ್ಚಿ ಚಿತ್ರದ ಮೂಲಕ ಹುಚ್ಚಿಯಾಗಿದ್ದಾರೆ.
ಹುಚ್ಚಿಯ ಪಾತ್ರದಲ್ಲಿ ನಟಿಸುವುದು ತಮ್ಮ ಬಹುದಿನಗಳ ಕನಸು ಎಂದೇ ಹೇಳುತ್ತಾ ಬರುತ್ತಿದ್ದ ಪೂಜಾಗಾಂಧಿ, ಈಗ ಸಿಕ್ಕಿರುವ ಅವಕಾಶವನ್ನು ಹೇಗೆ ಉಪಯೋಗಿಸಿಕೊಂಡಿದ್ದಾರೆ ಇನ್ನೇನು ಹೊರಬೀಳಲಿದೆ. ಆಕಸ್ಮಿಕವಾಗಿ ನಡೆಯುವ ಘಟನೆಯೊಂದರಲ್ಲಿ ಮನನೊಂದ ನಾಯಕಿ ಮಾನಸಿಕ ಆಘಾತಕ್ಕೀಡಾಗಿ ವಿಚಿತ್ರವಾಗಿ ವರ್ತಿಸುವುದು ಹಾಗೂ ಆ ಘಟನೆಯ ಹಿನ್ನೆಲೆ ಏನು ಎಂಬುದನ್ನು ಈ ಚಿತ್ರವು ಎಳೆ ಎಳೆಯಾಗಿ ಬಿಡಿಸುತ್ತದಂತೆ.
ಒಂದು ಮಗು ಹಾಗೂ ಪೂಜಾ ಗಾಂಧಿಯವರ ಸುತ್ತವೇ ತಿರುಗುವ ಕಥೆಯ ಬಹುಪಾಲು ಭಾಗವನ್ನು ರಾಜರಾಜೇಶ್ವರಿ ನಗರದ ಖಾಸಗಿ ಬಂಗಲೆಯೊಂದರಲ್ಲಿ ಚಿತ್ರೀಕರಿಸಲಾಗಿದೆಯಂತೆ. ಚಿತ್ರದಲ್ಲಿರುವುದು ಒಂದೇ ಹಾಡು ಎಂಬುದು ವಿಶೇಷ. ಶರಪಂಜರದಲ್ಲಿ ಕಾವೇರಿ ಪಾತ್ರದಲ್ಲಿ ಹುಚ್ಚಿಯನ್ನು ಕಂಡಿದ್ದ ಕನ್ನಡಿಗರಿಗೆ ಈಗ ಪೂಜಾಗಾಂಧಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ಕುತೂಹಕರ ಸಂಗತಿ.
ಚಿತ್ರದ ನಿರ್ಮಾಪಕರು ಡಿ.ಬಿ.ಕುಮಾರಸ್ವಾಮಿ, ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದವರು ವೆಂಕಟೇಶ ಪಂಚಾಂಗಂ. ಗಿರಿ ಪಂಚಾಂಗಂರವರ ಸಂಭಾಷಣೆ-ಸಂಗೀತ-ಸಾಹಿತ್ಯ ಚಿತ್ರಕ್ಕಿದೆಯಂತೆ. ಅನಂತನಾಗ್, ಸುಧಾರಾಣಿ, ವೆಂಕಟೇಶ ಪ್ರಸಾದ್, ಮನದೀಪ್ ರಾಯ್ ಚಿತ್ರದ ಇತರ ಕಲಾವಿದರು.