ದುನಿಯಾ ಚಿತ್ರದ ಶಿವಲಿಂಗು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್‌ಗೆ ಸದ್ಯಕ್ಕೆ ಒಂದು ಹಿಟ್ ಚಿತ್ರದ ಅಗತ್ಯವಿದೆ. ಏಕೆಂದರೆ, ಜಂಗ್ಲಿ ಚಿತ್ರದ ಹಾಡುಗಳು ಹಿಟ್ ಆದರೂ ಸಹ ಚಿತ್ರ ಅಷ್ಟೊಂದು ಯಶಸ್ಸು ಕಾಣಲಿಲ್ಲ. ತಾಕತ್ ಚಿತ್ರದ ಸಂಭಾಷಣೆಗಳು ಸಾಕಷ್ಟು ಹರಿತವಾಗಿದ್ದು ಪಡ್ಡೆ ಹುಡುಗರಿಗೆ ಕಚಗುಳಿಯಿಡುವಂತಿದ್ದರೂ, ಅದರಿಂದಲೂ ನಿರೀಕ್ಷಿತ ಬಂಪರ್ ಬೆಳೆ ಕೈಗೆ ಬರಲಿಲ್ಲ.
ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡಿರುವ ನಾಯಕ ನಟ ವಿಜಯ್ ಒಂದು ಉತ್ತಮ ಚಿತ್ರವನ್ನು ಉಣಬಡಿಸುವ ಹವಣಿಕೆಯಲ್ಲಿದ್ದಾರಂತೆ. ಅದರ ಫಲವೇ 'ಕರಿ ಚಿರತೆ' ಎಂಬ ಚಿತ್ರ. ದರ್ಶನ್ ಅಭಿನಯದ ಗಜ ಚಿತ್ರದ ನಿರ್ದೇಶನದ ಮೂಲಕ ಕರ್ನಾಟಕದಲ್ಲಿ ಮನೆಮಾತಾದ ಮಾದೇಶ್ ಈ ಚಿತ್ರದ ನಿರ್ದೇಶಕರು.
MOKSHA
ಈ ಚಿತ್ರದ ಚಿತ್ರೀಕರಣವು ಮೈಸೂರಿನ ಸುತ್ತ-ಮುತ್ತ ನಡೆದಿದ್ದು, ಈ ಅವಧಿಯಲ್ಲಿ ಎರಡು ಹಾಡುಗಳು ಹಾಗೂ ಎರಡು ಹೊಡೆದಾಟಗಳಷ್ಟೇ ಅಲ್ಲದೇ, ಮಾತಿನ ಭಾಗದ ಚಿತ್ರೀಕರಣವನ್ನು ನಡೆಸಲಾಗಿದೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಮೋಹನ್ ತಿಳಿಸಿದ್ದಾರೆ.
ಮೈಸೂರು ಅರಮನೆ, ಇಲವಾಲ, ನಂಜನಗೂಡು, ಕಳಲೆ ದೇವಸ್ಥಾನ, ಮಾದೇಶ್ವರ ಬೆಟ್ಟ ಇವೇ ಮೊದಲಾದ ರಮಣೀಯ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ವಿಜಯ್ ಗ್ಯಾರೇಜ್ ಮಾಲೀಕನ ಪಾತ್ರದಲ್ಲಿದ್ದರೆ, ಸುಧಾ ಬೆಳವಾಡಿ ತಾಯಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಶರ್ಮಿಳಾ ಮಾಂಡ್ರೆ, ಜೈಜಗದೀಶ್, ಯಜ್ಞಾಶೆಟ್ಟಿ ಇತರ ಕಲಾವಿದರು.
ಸ್ನೇಹಿತರಿಂದ ಕರಿ ಚಿರತೆ ಎಂದೇ ಕರೆಸಿಕೊಳ್ಳುವ ವಿಜಯ್‌ಗೆ ಕರಿ ಚಿರತೆ ಚಿತ್ರವು ಯಶಸ್ಸು ನೀಡಲಿದೆಯೇ? ಕಾಲವೇ ಹೇಳಬೇಕು. ಹೇಳುತ್ತದೆ ಕೂಡಾ.