ಈ ಬಣ್ಣದ ಮಾಯೆಯೇ ಅಂಥಾದ್ದು. 'ಬಿಟ್ಟಿರ್ದೆನೆಂದೊಡಂ ಬಿಡದು ನಿನ್ನನು ಮಾಯೆ' ಅಂತ ನಮ್ಮ ಶಿವಶರಣರು ಹೇಳಿದ್ದಾರಲ್ಲಾ? ಇದೂ ಸ್ವಲ್ಪ ಹಾಗೆಯೇ ಅಂದುಕೊಳ್ಳಿ. ಚಿತ್ರರಂಗದಲ್ಲಿನ ಮೋಸ, ದ್ವಂದ್ವಗಳಿಗೆ ಕೆಲವೊಂದು ಕಲಾವಿದರು ಬೇಸರಗೊಂಡು ನಿರ್ಗಮಿಸುತ್ತಾರಾದರೂ ಬಣ್ಣದ ಮೋಹ ಅವರನ್ನು ಸುಮ್ಮನೇ ಕುಳಿತುಕೊಳ್ಳುವಂತೆ ಬಿಡುವುದಿಲ್ಲ. ಹೀಗಾಗಿ ರಾಜಿ ಮಾಡಿಕೊಂಡು ಮತ್ತೆ ಸ್ಟುಡಿಯೋ ಹೊಸ್ತಿಲನ್ನು ಮೆಟ್ಟುತ್ತಾರೆ ಎಂಬುದು ಅಚ್ಚರಿಯ ಸಂಗತಿ.
ಅದಕ್ಕೀಗ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಸೇರ್ಪಡೆಯಾಗಿದ್ದಾರೆ. ನಾಟಕರಂಗದಲ್ಲಿಯೇ ತಮ್ಮ ತುಂಬು ಜೀವನವನ್ನು ನಡೆಸಿರುವ ಈ ಕಲಾವಿದ ಇದುವರೆಗೂ ಅಭಿನಯಿಸಿರುವ ಚಿತ್ರಗಳು ತುಂಬಾ ಎಂದೇನೂ ಹೇಳುವಂತಿಲ್ಲ. ಅದಕ್ಕೆ ಹಲವು ಕಾರಣಗಳೇ ಇವೆ. ಜೊತೆಗೆ ವಯಸ್ಸೂ ಮತ್ತೊಂದು ಕಾರಣವಿರಬಹುದು.
ಇವೆಲ್ಲದರ ಹೊರತಾಗಿಯೂ ಹಿಂದೆ ಅವರು ಪುಟ್ಟಣ್ಣ ಕಣಗಾಲರ ಋಣಮುಕ್ತಳು ಚಿತ್ರದಲ್ಲಿ ಅಭಿನಯಿಸಿದ್ದುಂಟು. ಸುದೀಪ್ ಅವರ ಶಾಂತಿನಿವಾಸ ಚಿತ್ರದಲ್ಲಿನ ಅವರ ಅಭಿನಯವನ್ನು ಮರೆಯುವಂತಿಲ್ಲ. ಉಪೇಂದ್ರರ ಆಪರೇಷನ್ ಅಂತ, ದರ್ಶನ್ ಅವರ ಗಜ ಚಿತ್ರದಲ್ಲೂ ಅವರ ಅಭಿನಯವಿತ್ತು ಎಂಬುದು ನಿಮಗೆಲ್ಲರಿಗೂ ಗೊತ್ತು.
ಇದಕ್ಕೆ ಇತ್ತೀಚಿನ ಸೇರ್ಪಡೆ, ಯಕ್ಷ ಚಿತ್ರ. ಈ ಚಿತ್ರದಲ್ಲಿ ಅವರು ಅಭಿನಯಿಸಲು ಒಪ್ಪಿಕೊಳ್ಳಲು ಕಾರಣ, ನಾನಾ ಪಾಟೇಕರ್ ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಒಪ್ಪಿರುವುದಂತೆ. ನಾನಾ ಪಾಟೇಕರ್ ಅವರ ಮೆಚ್ಚಿನ ನಟನಾಗಿರುವುದೇ ಇದಕ್ಕೆ ಕಾರಣ. ಇದುವರೆಗೂ ಡಾ.ರಾಜ್ಕುಮಾರ್ ಅವರೊಂದಿಗೆ ಅಭಿನಯಿಸಲು ಆಗಲಿಲ್ಲವಲ್ಲಾ ಎಂಬುದೊಂದು ಕೊರಗಿದೆ. ಕೊನೇ ಪಕ್ಷ ತಮ್ಮ ಮತ್ತೋರ್ವ ಮೆಚ್ಚಿನ ನಟನೊಂದಿಗಾದರೂ ಅಭಿನಯಿಸಿ ಇದನ್ನು ಶಮನ ಮಾಡಿಕೊಳ್ಳೋಣ ಎಂಬುದು ಅವರ ಇರಾದೆಯಂತೆ.
ಒಟ್ಟಿನಲ್ಲಿ ಯಕ್ಷ ಚಿತ್ರ ಒಂದಿಲ್ಲೊಂದು ಕುತೂಹಲದ ಮೂಟೆಯಾಗಿ ರೂಪುಗೊಳ್ಳುತ್ತಿದೆ.