ಕನ್ನಡ ಸಿನಿಮಾಗಳಲ್ಲಿ ಪ್ರಾಂತೀಯ ಭಾಷೆಗಳಿಗೂ ಅದರದೇ ಆದ ಮಹತ್ವವಿದೆ. ಮಂಗಳೂರು ಕನ್ನಡ, ಮಂಡ್ಯದ ಮಣ್ಣಿನ ಭಾಷೆ ಮತ್ತು ಉತ್ತರ ಕರ್ನಾಟಕದ ಭಾಷೆ ಹೆಚ್ಚು ಬಾರಿ ಸಿನಿಮಾಗಳಲ್ಲಿ ಪ್ರಯೋಗಕ್ಕೊಳಗಾಗಿವೆ. ಆದರೂ ಕನ್ನಡ ಚಿತ್ರಗಳಲ್ಲಿ ಪ್ರಾಂತೀಯ ಭಾಷೆಗಳನ್ನು ಅಷ್ಟು ಸಮರ್ಥಕವಾಗಿ ಬಳಸಿಕೊಂಡದ್ದಕ್ಕಿಂತ ಲೇವಡಿಯಾಗಿದ್ದೇ ಹೆಚ್ಚು ಎಂಬ ಆರೋಪವೂ ಜೊತೆಜೊತೆಗೇ ಇದೆ. ಅಂಥ ಸಂದರ್ಭದಲ್ಲಿ ಪ್ರಾಂತೀಯ ಭಾಷೆಯೊಂದರ ಪಾತ್ರ ಸದ್ಯದ ಮಟ್ಟಿಗೆ ಭೇಷ್ ಅನಿಸಿಕೊಂಡಿದ್ದು ಯೋಗರಾಜ ಭಟ್ಟರ ಮನಸಾರೆಯಲ್ಲಿ. ಈಗ ಅದೇ ಹಾದಿಯಲ್ಲಿ ಯಕ್ಷ ಹೊರಟಿದ್ದಾನೆ.
ಇತ್ತೀಚೆಗೆ ಮನಸಾರೆ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ರಾಜು ತಾಳಿಕೋಟೆ ನಿರ್ವಹಿಸಿದ್ದ ಧಾರವಾಡ ಕನ್ನಡ ಮಾತನಾಡುವ ಪಾತ್ರವನ್ನು ಪ್ರೇಕ್ಷಕ ಪ್ರಭು ಬಹುವಾಗಿ ಇಷ್ಟಪಟ್ಟಿದ್ದ. ಇದರ ಎಫೆಕ್ಟ್‌ನಿಂದಲೂ ಏನೋ, ರಾಜು ತಾಳಿಕೋಟೆ ಆಗಲೇ ಸುಗ್ರೀವ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಅದೇನೇ ಇರಲಿ. ಇದೀಗ ಹೆಚ್ಚು ಕಡಿಮೆ ಮನಸಾರೆಯಲ್ಲಿ ಯೋಗರಾಜ ಭಟ್ ಮಾಡಿದಂಥದ್ದೇ ಪ್ರಯೋಗವನ್ನು ಈಗ ಯಕ್ಷ ಚಿತ್ರದಲ್ಲಿ ನಿರ್ದೇಶಕ ರಮೇಶ್ ಭಾಗವತ್ ಮಾಡಲು ಹೊರಟಿದ್ದಾರೆ. ಹೇಳಿ ಕೇಳಿ ರಮೇಶ್ ಭಾಗವತ್ ದಕ್ಷಿಣ ಕನ್ನಡದವರು. ಅಂದ ಮೇಲೆ ಭಾಷೆಯನ್ನು ಬಿಡಲಾಗುತ್ತದೆಯೇ? ಹಾಗಾಗಿ ಚಿತ್ರದಲ್ಲಿ ದಕ್ಷಿಣ ಕನ್ನಡ ಸೊಗಡಿರುವ ಅಣ್ಣಾಜಿ ಹೆಸರಿನ ಪಾತ್ರವೊಂದನ್ನು ರಮೇಶ್ ಭಾಗವತ್ ಸೃಷ್ಟಿಸಿದ್ದಾರೆ. ಇದರ ನಿರ್ವಹಣೆಯನ್ನು ಪತ್ರಕರ್ತ, ನಟ, ತಂತ್ರಜ್ಞ ಸುಧಾಕರ್ ಬನ್ನಂಜೆ ಅವರ ಹೆಗಲಿಗೇರಿಸಿದ್ದಾರೆ.
ಈಗಾಗಲೇ ಯಕ್ಷ ಹಲವು ವಿಷಯಗಳಿಗೆ ಸುದ್ದಿ ಮಾಡಿದೆ. ಚಿತ್ರದಲ್ಲಿ ನಾನಾ ಪಾಟೇಕರ್, ಅತುಲ್ ಕುಲಕರ್ಣಿ ಮೊದಲಾದವರು ನಟಿಸುತ್ತಿದ್ದಾರೆ. ಇವರ ಥರ ಬನ್ನಂಜೆಯವರದ್ದೂ ಒಂದು ಪಾತ್ರವಿದೆ. ಅವರ ಮಾತುಗಳಲ್ಲಿ ಪಕ್ಕಾ ಮಂಗಳೂರು ಶೈಲಿಯ ಮ್ಯಾನರಿಸಂಗಳಿರುತ್ತವೆ ಎನ್ನುತ್ತಾರೆ ಭಾಗವತ್.