ರವಿ ಶ್ರೀವತ್ಸ ನಿರ್ದೇಶಿಸಲು ಉದ್ದೇಶಿಸಿರುವ 'ಮುತ್ತು ನಮ್ಮಪ್ಪ' ಪ್ರಾಜೆಕ್ಟ್ ನಿಂತು ಹೋಗಿದೆಯೇ? ಹೌದು. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಶಿವರಾಜ್ ಕುಮಾರ್ ಅಭಿನಯದ ಸುಗ್ರೀವ ಚಿತ್ರ ಹಾಗೂ 'ಮುತ್ತು ನಮ್ಮಪ್ಪ' ಚಿತ್ರಗಳ ಎಳೆ ಒಂದೇ ಆಗಿರುವುದರಿಂದ 'ಮುತ್ತು ನಮ್ಮಪ್ಪ' ಡ್ರಾಪ್ ಆಗಿದೆ ಎಂಬ ಸುದ್ದಿ ಬಂದಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಶ್ರೀವತ್ಸ ಸಿದ್ದರಿಲ್ಲ. ಎರಡೂ ಚಿತ್ರಗಳಲ್ಲಿ ಅಪ್ಪ-ಮಗನ ಕತೆಯಾದರೂ ವಿಷಯ ಬೇರೆಯದೇ ಎನ್ನುತ್ತಾರೆ ಅವರು.
ಹಾಗಾದರೆ 'ಮುತ್ತು ನಮ್ಮಪ್ಪ' ಚಿತ್ರದ ಗತಿ? ಅದು ಮುಂದಿನ ವರ್ಷಕ್ಕೆ ಮುಂದೆ ಹೋಗಿದೆ ಎನ್ನುತ್ತಾರೆ ರವಿ ಶ್ರೀವತ್ಸ. ಇದಕ್ಕೆ ಕಾರಣ. ಈಗಾಗಲೇ ಲವ್ ಮತ್ತು ಸೆಂಟಿಮೆಂಟ್ ಕಥಾವಸ್ತುವುಳ್ಳ ಹಲವು ಚಿತ್ರಗಳಲ್ಲಿ ಶಿವಣ್ಣ ನಟಿಸಿ ಬಂದಿದ್ದಾರೆ. ಭಾಗ್ಯದ ಬಳೆಗಾರ ಆಯಿತು. ಈಗ ದೇವರು ಕೊಟ್ಟ ತಂಗಿ, ಚೆಲುವೆಯೇ ನಿನ್ನೇ ನೋಡಲು, ಸುಗ್ರೀವ ಚಿತ್ರಗಳು ಇದೇ ಹಾದಿಯಲ್ಲಿ ಸಾಗುತ್ತದೆ. ಆದ್ದರಿಂದ ಅಂತದ್ದೊಂದು ಚಿತ್ರ ಸಧ್ಯಕ್ಕೆ ಬೇಡ ಎಂಬ ಕಾರಣಕ್ಕೆ ಮುತ್ತು ನಮ್ಮಪ್ಪ ಮುಂದೆ ಹೋಗಿದೆ ಎನ್ನುತ್ತಾರೆ.
ಅಂದ ಹಾಗೆ, ಶಿವಣ್ಣ ಸಧ್ಯದಲ್ಲೇ ಸೆಂಚುರಿ ಬಾರಿಸಲಿದ್ದಾರೆ. ಹಾಗಾಂತ ಕ್ರಿಕೆಟ್ ಸೇರಿದ್ದಾರೆಯೇ ಎಂದು ಆಶ್ಚರ್ಯ ಪಡಬೇಡಿ. ಅವರ ಸಿನಿಮಾಗಳ ಸಂಖ್ಯೆ ನೂರರ ಆಸುಪಾಸಿನಲ್ಲಿದೆ. ಭಾಗ್ಯದ ಬಳೆಗಾರ ತಮ್ಮ 93ನೇ ಚಿತ್ರವೆಂದು ಹೇಳಿಕೊಂಡಿದ್ದರು. ಅದರ ಜೊತೆಗೆ ಪ್ರೇಮ್ ನಿರ್ದೇಶನದ 'ಜೋಗಯ್ಯ' ತಮ್ಮ ನೂರನೇ ಚಿತ್ರವಾಗಲಿದೆಯೆಂದು ಅವರೇ ಘೋಷಿಸಿದ್ದಾರೆ. ಸಧ್ಯಕ್ಕೆ 'ಚೆಲುವೆಯೇ ನಿನ್ನ ನೋಡಲು', 'ದೇವರು ಕೊಟ್ಟ ತಂಗಿ' ಚಿತ್ರೀಕರಣದಲ್ಲಿದೆ. 'ಸುಗ್ರೀವ' ಶೀಘ್ರದಲ್ಲಿ ಸೆಟ್ಟೇರಲಿದೆ. ಇದಾದ ನಂತರ 'ತಮಸ್ಸು' ಚಿತ್ರದಲ್ಲಿ ನಟಿಸಲಿದ್ದಾರೆ ಶಿವಣ್ಣ. ಇವೆಲ್ಲವುದರ ನಡುವೆ 'ಪ್ರೀತ್ಸೋ ಹೃದಯಗಳಿಗೊಂದು ಪಿಸುಮಾತು' ಎಂಬ ಚಿತ್ರವೂ ಅವರ ಪಟ್ಟಿಯಲ್ಲಿದೆ.